ಮಂಡ್ಯ, ಜೂ13(Daijiworld News/SS): ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು ಎಂದು ಸಂಸದೆ ಸುಮಲತಾ ಅಂಬರೀಶ್ ಕಿವಿಮಾತು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿರುವ ಕುರಿತ ಪ್ರಶ್ನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಪರಿಹಾರ ತಲುಪಿರುವುದು ಮುಖ್ಯ. ಯಾರು ಕೊಟ್ಟಿದ್ದಾರೆ..?, ಯಾರು ಕೊಡಿಸಿದ್ದಾರೆ..? ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಎನ್ನುವುದು ತುಂಬಾ ತಪ್ಪಾಗುತ್ತದೆ. ಆ ರೀತಿ ತಪ್ಪು ಯಾರೂ ಮಾಡಬಾರದು. ನಾನಂತೂ ಆ ತಪ್ಪು ಮಾಡುವುದಿಲ್ಲ. ಅದನ್ನು ಪ್ರಚಾರಕ್ಕೆ ಬಳಸುವುದು ನನಗಿಷ್ಟ ಇಲ್ಲ ಎಂದು ಹೇಳಿದರು.
ನಾನು ಅನೇಕ ಬಾರಿ ಹೇಳಿದ್ದೇನೆ. ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು. ಯಾರೇ ಮಾಡಿರಲಿ. ಅದನ್ನ ಹೇಳಿಕೊಳ್ಳಬಾರದು. ಯಾರು ಬೇಕಾದರೂ ಇದರ ಲಾಭ ತೆಗೆದುಕೊಳ್ಳಲಿ. ನನಗೆ ಆ ಬಗ್ಗೆ ಬೇಸರವಿಲ್ಲ ಎಂದು ತಿಳಿಸಿದರು.
ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ. ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
2019ನೇ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧ ನಡೆದಿತ್ತು. ಇದೀಗ ಕನಗನಮರಡಿ ಗ್ರಾಮದ ಬಳಿ ಬಸ್ ನಾಲೆಗೆ ಉರುಳಿ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವಾರ್ ಆರಂಭವಾಗಿದೆ.
ಸುಮಲತಾ ಸಂಸದರಾದ ಬಳಿಕ ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಮೋದಿ ಸರ್ಕಾರದಿಂದ ಎರಡು ಲಕ್ಷ ಪರಿಹಾರ ಕೊಡಿಸಿದ್ದಾರೆ ಎಂದು ಸುಮಲತಾ ಬೆಂಬಲಿಗರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹಕ್ಕೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟವರಿಗೆ ಪರಿಹಾರ ಬಿಡುಗಡೆ ಮಾಡಿಸಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಪುಟ್ಟರಾಜು ಹಾಗೂ ಜಿಲ್ಲಾಧಿಕಾರಿ ಮಂಜುಶ್ರೀ. ಅವರ ಪ್ರಯತ್ನದಿಂದ ಪರಿಹಾರ ದೊರೆತಿದೆ. ಪರಿಹಾರ ಕೊಡಿಸುವಲ್ಲಿ ಸುಮಲತಾ ಸಾಧನೆ ಶೂನ್ಯ. ಯಾರದೋ ಕೆಲಸ ನಿಮ್ಮದೆಂದು ಹೇಳಿಕೊಳ್ಳಬೇಡಿ ಎಂದು ಜೆಡಿಎಸ್ ಕಾರ್ಯಕರ್ತರು ಫೇಸ್ಬುಕ್ನಲ್ಲಿ ಟಾಂಗ್ ನೀಡಿದ್ದಾರೆ.