ಕೋಲ್ಕತ್ತ, ಜೂ13(Daijiworld News/SS): ಪ್ರತಿಭಟನಾ ನಿರತ ವೈದ್ಯರು ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನಾ ನಿರತ ಕಿರಿಯ ವೈದ್ಯರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್ಎಸ್ಕೆಎಂ ಆಸ್ಪತ್ರೆಗೆ ಭೇಟಿ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ವೈದ್ಯರು ನ್ಯಾಯ ಬೇಕು ಎಂದು ಘೋಷಣೆ ಕೂಗಿದ್ದಾರೆ.
ಈ ಕೂಡಲೇ ನಿಮ್ಮ ಕೆಲಸಕ್ಕೆ ಹಾಜರಾಗಿ ಇಲ್ಲವೇ ಹಾಸ್ಟೆಲ್ ತೊರೆಯಿರಿ ಎಂದು ದೀದಿ ಖಡಕ್ಕಾಗಿ ಸೂಚನೆ ನೀಡಿದ್ದಾರೆ. ಈ ಪಿತೂರಿ ವೈದ್ಯರಿಂದ ಆಗುತ್ತಿರುವುದಲ್ಲ. ಹೊರಗಿನವರಿಗೆ ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸುವುದು ಬೇಕಾಗಿದೆ. ಅವರೆಲ್ಲಾ ಹೊರಗಿನವರು. ಅಂತಹವರಿಗೆಲ್ಲ ಸರ್ಕಾರ ಯಾವುದೇ ಕಾರಣಕ್ಕೂ ಸಹಕಾರ ನೀಡುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ದೂರಿದ್ದಾರೆ.
ನೀವು ಜನರಿಗೆ ಸೇವೆ ಮಾಡಬೇಕು. ನೀವು ಜನರಿಗೆ ಸೇವೆ ನೀಡದಿದ್ದರೆ ವೈದ್ಯರಲ್ಲ. ಅದೇ ರೀತಿ ಪೊಲೀಸರು ಪ್ರತಿಭಟನೆಗೆ ಕರೆ ನೀಡಿಲ್ಲ. ದುರದೃಷ್ಟವಶಾತ್ ಬಿಜೆಪಿ ಮತ್ತು ಸಿಪಿಐ (ಎಂ) ಪೊಲೀಸ್ಗಿರಿ ಮಾಡುತ್ತಿದ್ದಾರೆ. ಅವರು ಇಲ್ಲಿ ಹಿಂದೂ-ಮುಸ್ಲಿಂ ನಡುವೆ ದ್ವೇಷ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ಚಿಕಿತ್ಸೆ ಫಲಕಾರಿಯಾಗದೆ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಮಂಗಳವಾರ ರೋಗಿಯೊಬ್ಬರು ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷದ ಆರೋಪ ಹೊರಿಸಿ ಮೃತರ ಕುಟುಂಬದವರು ಕಿರಿಯ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.