ನವದೆಹಲಿ, ಜೂ 13(Daijiworld News/MSP): ಭಾರತೀಯ ಜನತಾ ಪಾರ್ಟಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ತತ್ವದ ಅಡಿ, ಹಾಗೂ ಅಮಿತ್ ಶಾ ಅವರು ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಶಾ ಅವರನ್ನು ಗೃಹ ಸಚಿವರನ್ನಾಗಿ ನೇಮಕ ಮಾಡಿರುವುದರಿಂದ ಬಿಜೆಪಿ ಹೊಸ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ರಾಜಧಾನಿ ದೆಹಲಿಯಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಲಿದ್ದು, ಗೃಹ ಸಚಿವ ಅಮಿತ್ ಶಾ ಅವರೇ ಪಕ್ಷದ ರಾಷ್ಟ್ರಾಧ್ಯಕ್ಷರಾಗಿಯೂ ಮುಂದುವರಿಯುಲಿದ್ದಾರಾ ಅಥವಾ ಬೇರೆಯವರನ್ನು ನೇಮಕ ಮಾಡಲಾಗುವುದೇ? ಎನ್ನುವುದು ಸಾಕಷ್ಟು ಕುತೂಹಲಕಾರಿಯಾಗಿದೆ.
ಭಾರತೀಯ ಜನತಾ ಪಾರ್ಟಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ತತ್ವ ಇರುವುದರಿಂದ ಅಮಿತ್ ಶಾ ಅವರನ್ನೇ ಮತ್ತೆ ರಾಷ್ಟ್ರಾಧ್ಯಕ್ಷರನ್ನಾಗಿ ನೇಮಿಸಿ, ಪಕ್ಷ ತನ್ನ ಹಿಂದಿನ ಸಿದ್ದಾಂತವನ್ನು ಮುರಿಯಬಹುದೇ ಎನ್ನುವುದೇ ಕುತೂಹಲಕಾರಿಯಾಗಿದೆ. ಪಕ್ಷದ ಮೂಲಗಳ ಪ್ರಕಾರ ಅಧ್ಯಕ್ಷರ ಆಯ್ಕೆಗೆ ಪಕ್ಷದೊಳಗೆ 6 ತಿಂಗಳ ನಂತರ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಅಮಿತ್ ಶಾ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಸಾಧ್ಯತೆ ಹೆಚ್ಚಾಗಿದೆ.
ಅಮಿತ್ ಶಾ ಅವರನ್ನು 2014ರ ಜುಲೈನಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 2017ರಲ್ಲಿ ಅವರ ಅಧಿಕಾರದ ಅವಧಿ ಮುಗಿದಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ಪಕ್ಷ ತೀರ್ಮಾನ ಮಾಡಿತ್ತು. ಪರಿಣಾಮ ಈ ಚುನಾವಣೆಯಲ್ಲೂ ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಸಾಧಿಸಿತ್ತು.