ಹೈದರಾಬಾದ್, ಫೆ.23 (DaijiworldNews/AA): ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿತ್ತು. ಈ ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿದೆ. ಈ ವೇಳೆ ಕುಸಿತದಲ್ಲಿ 8 ಮಂದಿ ಕಾರ್ಮಿಕರು ಸಿಲುಕಿದ್ದು, ಈಗಾಗಲೇ 48 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಕುಸಿತದಿಂದಾಗಿ ಸುರಂಗದ ಪ್ರವೇಶದ್ವಾರ ಮುಚ್ಚಿಕೊಂಡಿದ್ದು, ಪರ್ಯಾಯ ಸುರಂಗ ಮಾರ್ಗದ ಮೂಲಕ ಕಾರ್ಮಿಕರನ್ನು ರಕ್ಷಿಸಲು ಚಿಂತಿಸಲಾಗಿದೆ. ಸದ್ಯ ಸ್ಥಳಕ್ಕೆ ಸುರಂಗ ಕೊರೆಯುವ ಯಂತ್ರಗಳನ್ನು ಕರೆತರಲಾಗಿದ್ದು, ಇನ್ನಷ್ಟು ಯಂತ್ರಗಳನ್ನು ತರಲು ಸಿದ್ಧತೆ ನಡೆಸಿದೆ ಎಂದು ಎನ್ಡಿಆರ್ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡವು ಭಾನುವಾರ ರಾತ್ರಿ ಲೋಕೋಮೋಟಿವ್ನ ಸಹಾಯದಿಂದ 11 ಕಿ.ಮೀ ಹಾಗೂ ಕನ್ವೇಯರ್ ಬೆಲ್ಟ್ ನ ನೆರವಿನಿಂದ 2 ಕಿ.ಮೀ ಕ್ರಮಿಸಿದ್ದೇವೆ. ಈ ವೇಳೆ ಕಾರ್ಮಿಕರ ಹೆಸರಿನಿಂದ ಕೂಗಿದ್ದು, ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಸುರಂಗದ ಕೊನೆಯ 2 ಕಿ.ಮೀ ಪ್ರದೇಶವು ನೀರಿನಿಂದ ತುಂಬಿದ್ದು, ಅದನ್ನು ಸ್ವಚ್ಛಗೊಳಿಸಿದ ಬಳಿಕ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.