ಬೆಂಗಳೂರು, ಜೂ 13 (Daijiworld News/SM): ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ದೋಸ್ತಿ ಪಕ್ಷಗಳು ಮುಖಭಂಗ ಅನುಭವಿಸಿರುವ ವಿಚಾರ ಎಲ್ಲರಿಗೂ ತಿಳಿದಿವೆ. ಈ ನಡುವೆ, ಕಾಂಗ್ರೆಸ್ ಗೆದ್ದಿರುವುದು ಏಕೈಕ ಕ್ಷೇತ್ರದಲ್ಲಿ ಮಾತ್ರ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದಾರೆ. ಈ ಹಿನ್ನೆಲೆ ಇದೀಗ ಪ್ರತಿಕ್ರಿಯೆ ನೀಡಿದ ಸಂಸದ ಸುರೇಶ್, ಇದೀ ಕರ್ನಾಟಕ ನಮ್ಮ ಕ್ಷೇತ್ರದತ್ತ ಕಣ್ಣಿಟ್ಟಿದೆ ಎಂದಿದ್ದಾರೆ.
ಕುಣಿಗಲ್ ತಾಲ್ಲೂಕಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದೆಲ್ಲೆಡೆ ಮೋದಿ ಅಲೆ ಭರ್ಜರಿಯಾಗಿ ವರ್ಕೌಟ್ ಆಗಿದೆ. ಮೋದಿ ಅಲೆಗೆ ಇತರ ಪಕ್ಷಗಳು ಹಿನಾಯ ಸೋಲನ್ನು ಕಂಡಿವೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿರುವುದು ಈ ಒಂದು ಕ್ಷೇತ್ರದಲ್ಲಿ ಮಾತ್ರ. ಈ ಕ್ಷೇತ್ರ ಗೆಲ್ಲಲು ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ ಎಂದರು. ಇಡೀ ದೇಶದಲ್ಲೇ ಮೋದಿ ಅಲೆ ಇತ್ತು ಆದರೆ ಮಾಗಡಿ, ಕುಣಿಗಲ್, ಕನಕಪುರ, ರಾಮನಗರದಲ್ಲಿ ಈ ಅಲೆ ಕೊಚ್ಚಿಹೋಗಿದೆ ಎಂದರು.
ತನ್ನನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಿದ ಮತದಾರರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾವುದೇ ಗೊಂದಲ, ಅಪಸ್ವರ ಇಲ್ಲದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಧರ್ಮ ಪಾಲನೆಯಾಗಿದೆ. ಇದೇ ಕಾರಣದಿಂದಾಗಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆದ್ದು ಬೀಗಿದೆ ಎಂದರು.