ಬೆಂಗಳೂರು, ಜೂ 13 (Daijiworld News/SM): ರಾಜ್ಯ ಸರಕಾರದಲ್ಲಿ ಸಂಪುಟ ವಿಸ್ತರಣೆಯದ್ದೇ ಬಿಸಿಬಿಸಿ ಚರ್ಚೆ. ಜೂನ್ 14ರಂದು ಸಚಿವ ಸಂಪುಟ ವಿಸ್ತರಣೆಗೊಳ್ಳಲಿದೆ. ಸಂಪುಟ ವಿಸ್ತರಣೆ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಭಾರಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಕಾಂಗ್ರೆಸ್ ಸಿದ್ದರಾಮಯ್ಯಗೆ ಸೀಮಿತವಾದಂತಿದ್ದು, ಅದನ್ನು ಅಂತ್ಯಗೊಳಿಸಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಸಂಪುಟ ವಿಸ್ತರಣೆ ಬಳಿಕ ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬದಲಾಯಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಬದಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲು ಪಕ್ಷ ನಿರ್ಧರಿಸಿದೆ.
11 ಚುನಾವಣೆಗಳನ್ನು ಗೆದ್ದು ಈ ಬಾರಿಯ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ಖರ್ಗೆಯವರನ್ನು ರಾಜ್ಯ ರಾಜಕಾರಣದಲ್ಲಿ ಸಕ್ರಿಯಗೊಳಿಸಲಾಗುತ್ತಿದೆ. ಆ ಮೂಲಕ ಎರಡು ಪಕ್ಷಗಳ ನಡುವೆ ಸಮನ್ವಯ ಉಂಟುಮಾಡುವ ಮಹತ್ವದ ಜವಾಬ್ದಾರಿ ಖರ್ಗೆ ಹೆಗಲ ಮೇಲೆ ಇರಲಿದೆ.
ಇನ್ನೊಂದೆಡೆ ಸಿದ್ದರಾಮಯ್ಯ ಅವರೇ ಅಧ್ಯಕ್ಷರಾಗಿರುವ ಕಾಂಗ್ರೆಸ್ ಶಾಸಕಾಂಗಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇದೀಗ ಸಿದ್ದರಾಮಯ್ಯ ಅವರ ಸುತ್ತಲೇ ರಾಜ್ಯ ರಾಜಕಾರಣ ಸುತ್ತುತ್ತಿದೆ. ಪಕ್ಷದಲ್ಲಿ ಏಕ ವ್ಯಕ್ತಿ ಪ್ರದರ್ಶನವಾಗುತ್ತಿದೆ. ಇದು ಪಕ್ಷಕ್ಕೆ ಘಾಸಿಯನ್ನುಂಟು ಮಾಡಲಿದೆ ಎನ್ನುವುದನ್ನು ಮನಗಂದಿರುವ ಎಐಸಿಸಿ ಈ ನಿರ್ಣಯ ಕೈಗೊಂಡಿದೆ ಎಂದು ತಿಳಿದು ಬಂದಿದೆ.