ನವದೆಹಲಿ, ಜೂ14(Daijiworld News/SS): ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದ ಬಿಜೆಪಿಗೆ ನೂತನ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ವರ್ಷಾಂತ್ಯದವರೆಗೆ ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಚುನಾವಣೆ ಗೆಲುವಿನ ಬೆನ್ನಲ್ಲೇ ಪಕ್ಷ ಸಂಘಟನೆಗೆ ಷಾ ಒತ್ತು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಅತಿ ಯಶಸ್ವಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ್ದಾರೆ. ಹೀಗಾಗಿ ಸದಸ್ಯತ್ವ ನೋಂದಣಿ ಅಂತ್ಯವಾಗುವರೆಗೂ ಷಾ ಬದಲಾಗುವುದಿಲ್ಲ ಎಂದು ಬಿಜೆಪಿ ತಿಳಿಸಿದೆ.
ಉತ್ತರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ಅಂತ್ಯವಾಗುವರೆಗೂ ಅಧ್ಯಕ್ಷ ಸ್ಥಾನದಿಂದ ಷಾ ಬದಲಾವಣೆ ಮಾಡದಿರಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮತ್ತೊಮ್ಮೆ ದೇಶದಲ್ಲಿ ಪಕ್ಷ ಸಂಘಟನೆಗೆ ಷಾ ಮುಂದಾಗಿದ್ದು, ವರ್ಷಾಂತ್ಯದವರೆಗೂ ಷಾ ಮುಂದುವರಿಯಲು ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ. ಮೋದಿ-ಷಾ ತಂಡದ ಹಾಲಿ ಚಿಂತನೆಗಳ ಪ್ರಕಾರ ಸದಸ್ಯತ್ವ ನೋಂದಣಿ ಬಳಿಕ ಮತಗಟ್ಟೆ ಹಂತದಿಂದ ರಾಷ್ಟ್ರೀಯ ಘಟಕದವರೆಗೂ ಸಂಘಟನೆಯ ಪುನಾರಚನೆ ಮಾಡಲಾಗುತ್ತದೆ. ಈ ಪುನಾರಚನೆ ಬಳಿಕವೇ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.