ಅಂಕೋಲಾ, ಜೂ 14 (Daijiworld News/MSP): ಮಂಗಳೂರಿನಿಂದ ಮುಂಬೈಗೆ ಸಂಚರಿಸುತ್ತಿದ್ದ ಸುಗಮ ಟೂರಿಸ್ಟ್ ಸಂಸ್ಥೆಯ ಬಸ್ ಗೆ ಮಹಾರಾಷ್ಟ್ರದಿಂದ ಮಂಗಳೂರಿನತ್ತ ಸಾಗುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ, ಅಂಕೋಲಾದ ಹೊಸೂರು ಸೇತುವೆಯ ಬಳಿ ಜೂ.14 ರ ಶುಕ್ರವಾರ ಮುಂಜಾನೆ ನಡೆದಿದೆ.
ಬಸ್ ಹಾಗೂ ಲಾರಿ ಮುಖಾಮುಖಿ ಢಿಕ್ಕಿಯಾದ ರಭಸಕ್ಕೆ ವಾಹನಗಳ ಮುಂಬಾಗ ನಜ್ಜುಗುಜ್ಜಾಗಿದ್ದು, ಗಾಯಾಳು ಚಾಲಕರು ವಾಹನಗಳಿಂದ ಹೊರಬರಲಾಗದೆ ಪರದಾಡಿದರು. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಮಾಡಿ ಹೊರತಂದರು.
ಅಪಘಾತದ ಗಾಯಾಳುಗಳನ್ನು ಕುಮಟಾ ಮತ್ತು ಅಂಕೋಲಾ ತಾಲೂಕಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅಂಕೋಲಾ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು.