ಮುಂಬೈ, ಜೂ14(Daijiworld News/SS): ರೈತರ ಸಾಲವನ್ನು ತೀರಿಸಿದ ಬೆನ್ನಲ್ಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡುವುದರ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ಅಮಿತಾಬ್ ಬಚ್ಚನ್ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 49 ಸಿಆರ್ ಪಿಎಫ್ ಜವಾನರ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.
ಈ ಬಗ್ಗೆ ತಮ್ಮ ಬ್ಲಾಗ್'ನಲ್ಲಿ ಬರೆದುಕೊಂಡಿರುವ ಅವರು, ನನ್ನ ಮತ್ತೊಂದು ಭರವಸೆ ಈಡೇರಿದೆ. ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಸ್ವಲ್ಪ ಧನಸಹಾಯ ಮಾಡಬೇಕೆಂದು ಬಯಸಿದ್ದೆ. ಅದು ಈಡೇರಿದೆ. ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಹೆಸರು, ವಿಳಾಸ ತಿಳಿದುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆದರೂ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಭಾರತ ಸರ್ಕಾರದ ನೆರವಿನಿಂದ ಮತ್ತು ಸಿಆರ್ ಪಿಎಫ್ ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಗಳು ನಮ್ಮ ನೆರವಿಗೆ ಬಂದವು ಎಂದು ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಮಾಡಿರುವ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆಯಷ್ಟೇ ಬಿಹಾರದ 2 ಸಾವಿರಕ್ಕೂ ಮಿಕ್ಕಿ ರೈತರ ಬ್ಯಾಂಕ್ ಸಾಲವನ್ನು ತೀರಿಸುವ ಮೂಲಕ ಅಮಿತಾಬ್ ಬಚ್ಚನ್ ಹೃದಯ ವೈಶಾಲ್ಯತೆ ಮೆರೆದಿದ್ದರು. ಇದೀಗ ಮತ್ತೆ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.