ಬೆಂಗಳೂರು, ಫೆ.28 (DaijiworldNews/AK):ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳ ವಿಶ್ಲೇಷಣಾ ವರದಿಯ ಪ್ರಕಾರ, ಟ್ಯಾಟೂಗೆ ಬಳಸುವ ಇಂಕ್ನಲ್ಲಿ 22 ಹೆವಿ ಮೆಟಲ್ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಟ್ಯಾಟೂ ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಟ್ಯಾಟೂಗಳಿಂದ ಎಚ್ಐವಿ ಮತ್ತು ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳ ಬಗ್ಗೆ ವರದಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್ ಹಾಗೂ ಹಸಿರು ಬಟಾಣಿಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಬೆನ್ನಲ್ಲೇ ಸಚಿವರು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಔಷಧಗಳ ಮತ್ತು ಕಾಂತಿವರ್ಧಕ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ನಿಯಂತ್ರಿತ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳು ಟ್ಯಾಟೂ ಹಾಕಲು ಉಪಯೋಗಿಸುವ ಇಂಕ್ ಅನ್ನು ಮಾರುಕಟ್ಟೆಯಿಂದ ಪಡೆದು ವಿಶ್ಲೇಷಣೆ ನಡೆಸಲಾಗಿದೆ. ವಿಶ್ಲೇಷಣಾ ವದರಿಯ ಪ್ರಕಾರ ಟ್ಯಾಟೂನಲ್ಲಿ 22 ಹೆವಿ ಮೆಟಲ್ ಇರುವುದು ಕಂಡುಬಂದಿದೆ. ಇದು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಈ ಟ್ಯಾಟು ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಈ ಕುರಿತು ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುವುದರಿಂದ ಕ್ರಮ ಜರುಗಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದರು.