ಬೆಂಗಳೂರು, ಜೂ 14 (Daijiworld News/MSP): ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಚಿವ ಸಂಪುಟ 2 ನೇ ಬಾರಿಗೆ ಇಂದು ಶುಕ್ರವಾರ ವಿಸ್ತರಣೆಯಾಗುತ್ತಿದೆ. ಬಂಡಾಯದ ಬೇಗುದಿ, ಅಪಸ್ವರದ ಮಧ್ಯೆಯೇ ಕಾಂಗ್ರೆಸ್ ನ ಹತ್ತಾರು ಆಕಾಂಕ್ಷಿಗಳ ನಿರೀಕ್ಷೆಗಳನ್ನು ಬದಿಗಿರಿಸಿ ಇಬ್ಬರು ಪಕ್ಷೇತರರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪಕ್ಷೇತರರಲ್ಲಿ ಕೋಲಾರದ ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್. ನಾಗರಾಜ್ ಹಾಗೂ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ.
ಈ ಬಗ್ಗೆ ಶುಕ್ರವಾರ ಬೆಳಗ್ಗೆಯೇ ಇಬ್ಬರಿಗೂ ಕರೆ ಮಾಡಿರುವ ಮುಖ್ಯಮಂತ್ರಿ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬಿ.ಎಂ. ಫಾರೂಕ್ ಬೆಳಗ್ಗೆಯೇ ಜೆಪಿ ನಗರದಲ್ಲಿರುವ ಸಿಎಂ ಮನೆಗೆ ತೆರಳಿ ಈ ಕುರಿತು ಚರ್ಚೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ 10.30ಕ್ಕೆ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದ್ದು, ಹೆಚ್. ನಾಗರಾಜ್ ಹಾಗೂ ಬಿ.ಎಂ. ಫಾರೂಕ್ ಜೊತೆಗೆ ಪ್ರಮಾಣ ವಚನ ಸ್ವೀಕರಿಸಲಿರುವ ಉಳಿದ ಸಚಿವರು ಯಾರು? ಎಂಬುದು ನಿರ್ಧಾರವಾಗಲಿದೆ. ಸಂಪುಟ ಸಭೆಯ ನಂತರ ನೂತನ ಸಚಿವರು ರಾಜಭನದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಇಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.