ಕೊಡಗು, ಜೂ14(Daijiworld News/SS): ಶಾಲಾ ಶಿಕ್ಷಕಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕೊಡಗಿನ ಲಯನ್ಸ್ ಶಾಲಾ ಶಿಕ್ಷಕಿ ಅದೇಂಗಡ ಆಶಾ ಕಾವೇರಮ್ಮ ದುಷ್ಕರ್ಮಿಯ ಗುಂಡೇಟಿಗೆ ಬಲಿಯಾದವರು.
ಕೊಡಗಿನ ಪೊನ್ನಂಪೇಟೆ ಬಳಿ ಬಾಳೆಲೆಯಲ್ಲಿ ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದ ಶಿಕ್ಷಕಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಆರೋಪಿಯನ್ನು ಗೋಣಿಕೊಪ್ಪಲುವಿನ ಮಾಚಿಮಾಡ ಜಗದೀಶ್ ಎಂದು ಗುರುತಿಸಲಾಗಿದೆ.
ಶಿಕ್ಷಕಿ ಹತ್ಯೆ ಮಾಡಿದ ಬಳಿಕ ಜಗದೀಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಳೆಲೆ ಉಪ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.