ಬೆಂಗಳೂರು,ಜೂ 14 (Daijiworld News/MSP): ರಾಜ್ಯದ ಜನರಿಗೆ ಕೋಟಿ ವಂಚಿಸಿ ದೇಶದಿಂದ ಪರಾರಿಯಾಗಿರೋ ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ವಿರುದ್ಧ 23 ಸಾವಿರ ದೂರುಗಳು ದಾಖಲಾಗಿವೆ. ಈ ನಡುವೆ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಮೆಂಗಳೂರಿನ ವಕೀಲರೊಬ್ಬರು, ಹೈಕೋರ್ಟ್ ನಲ್ಲಿ ಪಿಐಎಲ್ ಹೂಡಿದ್ದಾರೆ.
ಗಂಗಾನಗದ ನಿವಾಸಿ ವಕೀಲ ಮೊಹಮ್ಮದ್ ತಾಹೀರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ. ಈ ನಡುವೆ ಮನ್ಸೂರ್ ಖಾನ್ ದುಬೈಗೆ ಎಸ್ಕೇಪ್ ಆಗಿರೋದು ಖಚಿತಗೊಂಡಿದೆ. ಜೂನ್ 8 ರ ಶನಿವಾರವೇ ದೇಶದಿಂದ ಕಾಲ್ಕಿತ್ತಿದ್ದಾನೆ. ಆತ ಪರಾರಿಯಾದ ಮಾರನೇ ದಿನವೇ ಬಹುದೊಡ್ದ ಐಎಂಎ ವಂಚನೆಯ ಜಾಲ ಬಯಲಾಗಿದೆ.
ಮನ್ಸೂರ್ ಖಾನ್ ನಿಂದ ತನಗೆ 4.8 ಕೋಟಿ ರೂಪಾಯಿ ಹಣ ವಾಪಾಸ್ ಬಂದಿಲ್ಲ ಎಂದು ಆತನ ಆಪ್ತ ಸ್ನೇಹಿತ ಖಲೀದ್ ಅಹಮದ್ ದೂರು ದಾಖಲಿಸುತ್ತಿದ್ದಂತೆ ಎಚ್ಚೆತ್ತುಕೊಂಡ ತಡಮಾಡದೇ, ತನ್ನದೇ ಜಾಗ್ವಾರ್ ಕಾರ್ ಏರಿ ತಾನೇ ಚಲಾಯಿಸಿಕೊಂಡು ಏರ್ಬಸ್ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಪಡೆದುಕೊಂಡು ದುಬೈಗೆ ಪ್ರಯಾಣಿಸಿದ್ದ. ಬೆಂಗಳೂರು ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪಿದ್ದ ಮನ್ಸೂರ್ 6.40ಕ್ಕೆ ತನ್ನ ಪಾಸ್ಪೋರ್ಟ್, ವೀಸಾಗಳನ್ನು ಚೆಕಿಂಗ್ ಗೆ ಒಳಪಡಿಸಿ ರಾತ್ರಿ 8.45ಕ್ಕೆ ಏರ್ ಬಸ್ನ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಳಿತು ದುಬೈಗೆ ಹಾರಿದ್ದಾನೆ.