ಬೆಂಗಳೂರು, ಮಾ.03 (DaijiworldNews/AA): ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವ ದಮನ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.

ವಿಧಾನಸಭೆ ಬಜೆಟ್ ಅಧಿವೇಶನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನವನ್ನು ಹೆಚ್ಚು ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್. ಈಗ ಸರ್ಕಾರ, ರಾಜ್ಯಪಾಲರ ಹಲವು ಅಧಿಕಾರ ಮೊಟಕು ಮಾಡುತ್ತಿದೆ. ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಲವು ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲರು ಕೇಳಿರುವುದಕ್ಕೆ ಸ್ಪಷ್ಟನೆ ಕೊಡದೇ ಬೊಬ್ಬೆ ಹಾಕುತ್ತಿದ್ದಾರೆ. ಗ್ಯಾರಂಟಿಗಳಿಂದ ಕಾಂಗ್ರೆಸ್ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ. ಯಾವ ರಾಜ್ಯಪಾಲರಿಗೆ ಅವಹೇಳನ ಮಾಡಿದ್ರೋ ಅದೇ ರಾಜ್ಯಪಾಲರಿಂದ ಇವತ್ತು ಸರ್ಕಾರವನ್ನು ಹೊಗಳಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಯಾವ ಮುಖ ಇಟ್ಕೊಂಡು ರಾಜ್ಯಪಾಲರಿಂದ ಸರ್ಕಾರದ ಸಾಧನೆ ಹೇಳಿಸಿಕೊಳ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರು ಸರಿ ಇಲ್ಲ ಅಂತ ಇವರೇ ಹೇಳಿ ಅವರಿಂದಲೇ ಹೊಗಳಿಸಿಕೊಳ್ಳುವುದು ನಾಚಿಕೆಯ ಸಂಗತಿ. ಈ ವಿಚಾರ ಇಟ್ಟುಕೊಂಡು ನಾವು ಇವತ್ತು ಶಾಸಕರ ಭವನದಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.