ನವದೆಹಲಿ, ಮಾ.03(DaijiworldNews/TA): ವಿಶ್ವ ವನ್ಯಜೀವಿ ದಿನದ ಅಂಗವಾಗಿ ಸೋಮವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಜುನಾಗಢದ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿಗೆ ತೆರಳಿದ್ದರು. ಜೀಪ್ ಸಫಾರಿಯ ಸಮಯದಲ್ಲಿ, ಅವರೊಂದಿಗೆ ಕೆಲವು ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು. ಈ ಸಿಂಹಗಳ ಚಿತ್ರಗಳನ್ನು ಸೆರೆಹಿಡಿದು ಖುಷಿಪಡೆದರು ಎನ್ನಲಾಗಿದೆ.

"ಪ್ರತಿಯೊಂದು ಜೀವಿಯೂ ಪ್ರಮುಖ ಪಾತ್ರ ವಹಿಸುತ್ತದೆ - ಮುಂದಿನ ಪೀಳಿಗೆಗೆ ಅವುಗಳ ಭವಿಷ್ಯವನ್ನು ರಕ್ಷಿಸೋಣ. ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ಭಾರತದ ಕೊಡುಗೆಗಳ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಪ್ರಧಾನಿ ಅದ್ಭುತ ಕ್ಷಣಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗಿರ್ ವನ್ಯಜೀವಿ ಅಭಯಾರಣ್ಯದ ಪ್ರಧಾನ ಕಛೇರಿಯಾದ ಸಸಾನ್ ಗಿರ್ನಲ್ಲಿ, ಅವರು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯ ನಂತರ, ಪ್ರಧಾನಿ ಸಸಾನ್ನಲ್ಲಿ ಕೆಲವು ಮಹಿಳಾ ಅರಣ್ಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.