ಶ್ರೀನಗರ, ಜೂ14(Daijiworld News/SS): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಸೇನೆಯ ದಾಳಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸೇನಾಪಡೆಗಳು ಪುಲ್ವಾಮ ಜಿಲ್ಲೆಯ ಆವಂತಿಪೋರಾದಲ್ಲಿ ಖಚಿತ ಮಾಹಿತಿ ಮೇರೆಗೆ ಉಗ್ರರು ಅಡಗಿ ಕುಳಿತಿದ್ದ ಮನೆಯ ಬಳಿ ದಾಳಿ ನಡೆಸಿದ್ಧಾರೆ. ಸೇನಾಪಡೆಗಳು ಆಗಮಿಸುತ್ತಿದ್ದಂತೆಯೇ ಉಗ್ರರು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಮಾತ್ರವಲ್ಲ, ಸೈನಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೈನಿಕರು ಕೂಡ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಉಗ್ರರು ಸಂಗ್ರಹಿಸಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿದೆ. ಘಟನಾ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಸತ್ತ ಉಗ್ರರ ಗುರುತು ಇನ್ನಷ್ಟೇ ತಿಳಿಯಬೇಕಿದೆ ಎಂದು ಭಾರತೀಯ ಸೇನಾಪಡೆ ತಿಳಿಸಿದೆ.