ಬೆಂಗಳೂರು, ಜೂ14(Daijiworld News/SS): ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 3667 ಎಕರೆ ಜಮೀನು ನೀಡುವ ನಿರ್ಧಾರವನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಗೊಂಡಿದೆ.
ಮಹಾತ್ಮಾ ಗಾಂಧಿ ಪುತ್ಥಳಿ ಎದುರು ರಾಜ್ಯ ಬಿಜೆಪಿ ವತಿಯಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭವಾಗಿದ್ದು, ಇದಕ್ಕೂ ಮೊದಲು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ್ದಾರೆ. ಬಳಿಕ ಧರಣಿ ಆರಂಭವಾಗಿದೆ.
ಜಿಂದಾಲ್ ಕಂಪನಿಗೆ ಭೂಮಿ ನೀಡಿಕೆ ಸಂಬಂಧ ರಾಜ್ಯ ಸರಕಾರವು ಸುಳ್ಳು ಭರವಸೆ ನೀಡುವ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿ, ನೂರಾರು ವೈಫಲ್ಯಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಜಿಂದಾಲ್ ಕಂಪನಿಗೆ ಸರ್ಕಾರಿ ಜಮೀನು ಮಾರಾಟ ಮಾಡುವ ವಿಚಾರದ ಬಗ್ಗೆ ಕರ್ನಾಟಕದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಸರ್ಕಾರ ಮತ್ತು ಪ್ರತಿಪಕ್ಷ ನಡುವೆ ಈ ವಿಚಾರದಲ್ಲಿ ವಾಕ್ಸಮರ ನಡೆಯುತ್ತಿದೆ.
ಪ್ರತಿಭಟನೆಯಲ್ಲಿ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ವಿಧಾನಸಭೆ ವಿಪಕ್ಷ ಉಪನಾಯಕ ಗೋವಿಂದ ಕಾರಜೋಳ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಎನ್. ರವಿಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ.