ಜಾಮ್ ನಗರ, ,ಮಾ.04(DaijiworldNews/AK): ಗುಜರಾತ್ನ ಜಾಮ್ ನಗರದಲ್ಲಿರುವ ವಂತಾರ ವನ್ಯಜೀವಿ ರಕ್ಷಣೆ , ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ವಂತಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಭೇದಗಳಿಗೆ ನೆಲೆ ಒದಗಿಸಲಾಗಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಇರುವಂಥ ವಿವಿಧ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ಇನ್ನು ಪುನರ್ವಸತಿ ಒದಗಿಸಲಾದ ವಿವಿಧ ಪ್ರಭೇದದ ಪ್ರಾಣಿಗಳೊಂದಿಗೆ ಅವರು ಸಮಯವನ್ನು ಕಳೆದರು.
ವಂತಾರದಲ್ಲಿ ಇರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಎಂಆರ್ಐ, ಸಿಟಿ ಸ್ಕ್ಯಾನ್ಗಳು, ಐಸಿಯುಗಳು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತವೈದ್ಯಶಾಸ್ತ್ರ, ಆಂತರಿಕ ಔಷಧ ಇತ್ಯಾದಿಗಳನ್ನು ಹೊಂದಿರುವ ವಿವಿಧ ವಿಭಾಗಗಳಿಗೆ ಸಹ ಭೇಟಿ ನೀಡಿದರು. ಇಲ್ಲಿ ಅವರು ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದದ ಹಿಮಾಲಯದ ಚಿರತೆ ಮರಿ, ಕ್ಯಾರಕಲ್ಸ್ (ವಿಶಿಷ್ಟ ಬಗೆಯ ಕಾಡು ಬೆಕ್ಕು) ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳಿಗೆ ಆಹಾರ ನೀಡಿದರು.