ಬೆಂಗಳೂರು, ಜೂ 14 (Daijiworld News/MSP): ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆ ಕೊನೆಗೂ ಇಂದು ನಡೆದಿದ್ದು, ಪಕ್ಷೇತರ ಶಾಸಕರಾದ ಆರ್. ಶಂಕರ್ ಹಾಗೂ ನಾಗೇಶ್ ಕುಮಾರಸ್ವಾಮಿಯವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.ರಾಜ್ಯಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಮೊದಲಿಗೆ ಆರ್. ಶಂಕರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು, ಬಳಿಕ ನಾಗೇಶ್ ಕೂಡಾ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರೂ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಂಕರ್, ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (ಕೆಪಿಜೆಪಿ) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾಜರಿದ್ದರು.ಆರ್. ಶಂಕರ್ ರಾಣೆಬೆನ್ನೂರು ಕ್ಷೇತ್ರದ ಶಾಸಕರಾಗಿದ್ದರೆ, ನಾಗೇಶ್ ಮುಳುಬಾಗಿಲು ಕ್ಷೇತ್ರದ ಶಾಸಕರಾಗಿದ್ದಾರೆ. ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರಿಗೆ ಇನ್ನೂ ಖಾತೆಯನ್ನು ಹಂಚಿಕೆ ಮಾಡಿಲ್ಲ.
ಜೆಡಿಎಸ್ ಕೋಟಾದಲ್ಲಿ ಮತ್ತೊಂದು ಖಾತೆಯನ್ನು ಬಿ.ಎಂ ಫಾರೂಖ್ ಅವರಿಗೆ ನೀಡಲಾಗುತ್ತದೆ ಎಂದು ಬಲವಾದ ಮಾತುಗಳು ಹೇಳಿಬಂದಿತ್ತು. ಆದರೆ ಅಂತಿಮ ಕ್ಷಣದ ಬದಲಾವಣೆಯಿಂದಾಗಿ ಬಿ.ಎಂ ಫಾರೂಕ್ ಅವರ ಹೆಸರನ್ನು ಕೈ ಬಿಡಲಾಗಿದೆ.