ಬೆಂಗಳೂರು,,ಮಾ.05 (DaijiworldNews/AK): ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕಾಯಕ ಸಮುದಾಯಗಳಿಗೆ ಆರ್ಥಿಕ ಶಕ್ತಿ ಕೊಟ್ಟು ಅವರನ್ನು ಮುಂದಕ್ಕೆ ತರುವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಸ್ಲಿಮರನ್ನು ಓಲೈಸಲು ಹೊರಟ ಕಾಂಗ್ರೆಸ್ ಸರಕಾರವು, ಇತರರೆಲ್ಲರಿಗೂ ಅನ್ಯಾಯ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ನಿಜವಾಗಿಯೂ ಅಹಿಂದ ನಾಯಕರೇ ಆಗಿದ್ದರೆ ಇಷ್ಟೊತ್ತಿಗೆ ಅನೇಕ ಹಿಂದುಳಿದ ಸಮಾಜಗಳಿಗೆ ಆರ್ಥಿಕ ಶಕ್ತಿ ತುಂಬಬೇಕಿತ್ತು. ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ನೀವು ಕೈ ಜೋಡಿಸಬೇಕಿತ್ತು ಎಂದು ತಿಳಿಸಿದರು.
ಮಡಿವಾಳರು, ಸವಿತಾ ಸಮಾಜ ಸೇರಿ ಅನೇಕ ಕಾಯಕ ಸಮುದಾಯಗಳು ನಾಡಿನಲ್ಲಿವೆ ಎಂದರು.
ಅಲ್ಪಸಂಖ್ಯಾತರಿಗೆ ಶೇ 4ರಷ್ಟು ಮೀಸಲಾತಿಯ ನಿರ್ಧಾರ ತೆಗೆದುಕೊಳ್ಳಲು ಹೊರಟಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ? ಬೇರೆ ಯಾರೂ ಇಲ್ಲವೇ ಎಂದು ಕೇಳಿದರು. ಈ ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರವು ಮುಸ್ಲಿಮರ ಓಲೈಕೆ ಮಾಡಲು ಹೊರಟಿದೆ. ಜನರೇ ಇವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ತಿಳಿಸಿದರು. ಅವರು ಭಂಡರಿದ್ದಾರೆ. ದಪ್ಪ ಚರ್ಮ ಬೆಳೆಸಿಕೊಂಡಿದ್ದಾರೆ. ವಿಪಕ್ಷಗಳು ಏನೇ ಹೇಳಿದರೂ ಇವರಿಗೆ ನಾಟುವುದಿಲ್ಲ; ಈ ನಿರ್ಧಾರವನ್ನು ನಾವು ಸದನದಲ್ಲಿ ಪ್ರಶ್ನಿಸುತ್ತೇವೆ ಎಂದರು.