ಬೆಂಗಳೂರು, ಜೂ 14 (Daijiworld News/MSP): ಜಿಂದಾಲ್ಗೆ 3,667 ಎಕರೆ ಸರ್ಕಾರಿ ಭೂಮಿ ಮಾರಾಟ ಮಾಡುವ ಮೈತ್ರಿ ಸರ್ಕಾರದ ನಿರ್ಧಾರ ಹಾಗೂ ಬರ ನಿರ್ವಹಣೆ ವೈಫಲ್ಯ ಖಂಡಿಸಿ ಶುಕ್ರವಾರದಿಂದ ರಾಜ್ಯ ಬಿಜೆಪಿ ನಾಯಕರು ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಿದ್ದಾರೆ.
ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ.
ಈ ಸಂದರ್ಭ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರ ತುಘಲಕ್ ದರ್ಬಾರ್ ನಂತೆ ಆಡಳಿತ ನಡೆಸುತ್ತಿದ್ದು, ಈ ಸರ್ಕಾರ ಮನೆಗೆ ಹೋಗೋವರೆಗೆ ನಮ್ಮ ಪ್ರತಿಭಟನೆ ನಿಲ್ಲಲ್ಲ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು. ಮುಖ್ಯಮಂತ್ರಿಗಳು ವಾಸ್ತು ದೋಷ ಎಂದು ಒಂದು ವರ್ಷದಿಂದ ವಿಧಾನಸೌಧ ಬಿಟ್ಟು ಫೈವ್ ಸ್ಟಾರ್ ಹೊಟೇಲ್ ವಾಸ್ತವ್ಯ ಹೂಡಿದ್ದಾರೆ. ಜನಸಾಮಾನ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಕಮಿಷನ್ ಕೊಡುವವರು ಭೇಟಿಯಾಗಲೆಂದು ಮುಖ್ಯಮಂತ್ರಿಗಳು ಹೋಟೇಲ್ ಕುಳಿತಿದ್ದಾರೆ. ಜಿಂದಾಲ್ಗೆ ಭೂಮಿ ಮಾರಾಟ ವ್ಯವಹಾರದಲ್ಲಿ ಸರ್ಕಾರದ ಪ್ರಮುಖರಿಗೆ ಸಾಕಷ್ಟು ಕಿಕ್ ಬ್ಯಾಕ್ ಬಂದಿರೋ ಅನುಮಾನವಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಸರ್ಕಾರದ ಬುಡ ಅಲುಗಾಡುತ್ತಿದೆ ಎಂದು ತಿಳಿದ ಬಳಿಕ ಎಚ್ಚೆತ್ತುಕೊಂಡಿರುವ ಸಿಎಂ ಇದೀಗ ಸರ್ಕಾರಿ ಬಂಗಲೆಗೆ ವಾಸ್ತವ್ಯ ಬದಲಾಯಿಸುತ್ತೇನೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಬಿಜೆಪಿ ಸಂಸದರು ದೆಹಲಿಗೆ ತೆರಳಬೇಕಾಗಿರುವುದರಿಂದ ಭಾನುವಾರದಂದು ಸಿಎಂ ಮನೆ ಮುತ್ತಿಗೆ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.