ಬೆಂಗಳೂರು, ಜೂ14(Daijiworld News/SS): ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರಕ್ಕೆ ಚಾಲನೆ ಸಿಕ್ಕಿದ್ದು ಬಿ.ಎಸ್ ಯಡಿಯೂರಪ್ಪನವರ ಆಡಳಿತದ ಅವಧಿಯಲ್ಲಿ. ಆದರೆ ಈಗ ಅವರೇ ವಿರೋಧ ಮಾಡಿದರೆ ಹೇಗೆ..? ಎಂದು ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಚಾಲನೆ ಸಿಕ್ಕಿದೆ. ಯಡಿಯೂರಪ್ಪ ಹಿಂದೆ ಡಿಸಿಎಂ ಆಗಿದ್ದ ವೇಳೆಯೇ 2,000 ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಿ ಎಂದು ಆದೇಶ ಮಾಡಿದ್ದರು. ನಾವೇನೂ ಈಗ ಹೊಸದಾಗಿ ಆದೇಶ ಮಾಡುತ್ತಿಲ್ಲ. ಆದರೆ ಈಗ ಅವರೇ ವಿರೋಧ ಮಾಡಿದರೆ ಹೇಗೆ..? ಎಂದು ಪ್ರಶ್ನಿಸಿದರು.
ಜಿಂದಾಲ್ಗೆ ಜಮೀನು ನೀಡುವ ವಿಚಾರದಲ್ಲಿ ಮರು ಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಮರು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 3667 ಎಕರೆ ಜಮೀನು ನೀಡುವ ನಿರ್ಧಾರವನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಗೊಂಡಿದೆ. ಜಿಂದಾಲ್ ಕಂಪನಿಗೆ ಭೂಮಿ ನೀಡಿಕೆ ಸಂಬಂಧ ರಾಜ್ಯ ಸರಕಾರವು ಸುಳ್ಳು ಭರವಸೆ ನೀಡುವ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿ, ನೂರಾರು ವೈಫಲ್ಯಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.