ಬೆಂಗಳೂರು, ಜೂ14(Daijiworld News/SS): ಸರಿಯಾಗಿ ತೆರಿಗೆ ಕಟ್ಟಿದವರಿಗೆ ಭೂಮಿ ಕೊಡುತ್ತಿದ್ದೇವೆ. ಜಿಂದಾಲ್ ಕಂಪನಿಗೆ ಭೂಮಿ ಕೊಡುವುದನ್ನು ನಾನು ಬೆಂಬಲಿಸುತ್ತೇನೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡವಾಳ ಹೂಡಿ ಕಂಪನಿಗಳು ಉದ್ಯೋಗ ಸೃಷ್ಟಿಸುತ್ತವೆ. ಹೀಗಾಗಿ ತೆರಿಗೆ ಕಟ್ಟಿದವರಿಗೆ ಭೂಮಿ ಕೊಡುತ್ತಿದ್ದೇವೆ. ಜಿಂದಾಲ್'ಗೆ ಭೂಮಿ ಕೊಡುವುದನ್ನು ನಾನಂತೂ ಬೆಂಬಲಿಸುತ್ತೇನೆ. ನಾನು ಜಿಂದಾಲ್ ಪರ ಇದ್ದೇನೆ ಎಂದು ಹೇಳಿದರು.
ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರೇ ಜಿಂದಾಲ್ ವಿಚಾರಕ್ಕೆ ಫೌಂಡೇಶನ್ ಹಾಕಿದವರು. ಬೇಕಾದರೆ ದಾಖಲೆಗಳನ್ನು ತೆಗೆದು ನೋಡಲಿ. ಬಿಜೆಪಿಯವರು ಲೇಟ್ ಮಾಡಬಾರದು ಕೂಡಲೇ ಹೋರಾಟ ಆರಂಭಿಸಲಿ. ಜಿಂದಾಲ್ ಒಳ್ಳೆಯ ಉದ್ಯಮಿ, ಲಾಭ ಇಲ್ಲದೇ ಯಾರೂ ವ್ಯವಹಾರ ಮಾಡಲ್ಲ. ಆದರೆ ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಆಗ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ, ಸಹಾಯ ಆಗುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ತೆರಿಗೆ ಕಟ್ಟೋದು ಮತ್ತು ಬಂಡವಾಳ ಹೂಡೋದು ಕಂಪನಿಗಳು, ಉದ್ಯಮಿಗಳು. ಅವರು ಜಿಎಸ್ಟಿ ಕಟ್ಟುತ್ತಾರೆ ಹಾಗೂ ಇತರೆ ನಿಯಮಗಳನ್ನು ಕೂಡ ಸರಿಯಾದ ರೀತಿಯಲ್ಲಿ ಪಾಲಿಸುತ್ತಾರೆ. ಆದರೆ, ಹಳ್ಳಿಗಳಿಂದ ಯಾರೂ ತೆರಿಗೆ ಕಟ್ಟೋದಿಲ್ಲ. ವ್ಯವಸಾಯ ಮಾಡಿಕೊಂಡು ಇರುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.