ಉತ್ತರ ಪ್ರದೇಶ, ಮಾ.07 (DaijiworldNews/AK): ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಯುಪಿಎಸ್ಸಿ ಪರೀಕ್ಷೆ ಲಕ್ಷಾಂತರ ಜನರ ಕನಸು! ಆದಾಗ್ಯೂ, ಕೆಲವರು ಮಾತ್ರ ಈ ಕಠಿಣ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಯಶಸ್ವಿಯಾದವರಲ್ಲಿ ಐಎಎಸ್ ಅಧಿಕಾರಿ ಕಾಜಲ್ ಜಾವ್ಲಾ ಕೂಡ ಒಬ್ಬರು.

ಉತ್ತರ ಪ್ರದೇಶದ ಮೀರತ್ನವರಾದ ಕಾಜಲ್ ಜಾವ್ಲಾ 2010 ರಲ್ಲಿ ಮಥುರಾದಿಂದ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ನಲ್ಲಿ ಬಿ.ಟೆಕ್ ಪದವಿ ಪಡೆದರು. ನಂತರ ಅವರು ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯಾದ ವಿಪ್ರೋಗೆ ಸೇರಿದರು. ಆದಾಗ್ಯೂ, ಜಾವ್ಲಾ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು. ಒಂಬತ್ತು ವರ್ಷಗಳ ಕಾಲ, ಕಾಜಲ್ ತಮ್ಮ ಪೂರ್ಣ ಸಮಯದ ಕೆಲಸದೊಂದಿಗೆ ಅಧ್ಯಯನವನ್ನು ಸಮತೋಲನಗೊಳಿಸುತ್ತಾ ಅವಿರತವಾಗಿ ಶ್ರಮಿಸಿದರು.
ಕಾಜಲ್ ಅವರ ಪತಿ ಮನೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದರಿಂದ, ಅವರು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸುಲಭವಾಯಿತು. ಜಾವ್ಲಾ ತಮ್ಮ ಪ್ರಯಾಣದ ಸಮಯವನ್ನು ಬಳಸಿಕೊಂಡು ಪ್ರತಿದಿನ ಮೂರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಇದರೊಂದಿಗೆ ಅವರು ತಮ್ಮ ರಜಾ ದಿನಗಳನ್ನು ಪೂರ್ಣ ಸಮಯದ ಅಧ್ಯಯನಕ್ಕೆ ಬಳಸಿಕೊಂಡರು.
2018 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಕಾಜಲ್ ಜಾವ್ಲಾ ಅವರು 28 ನೇ ಅಖಿಲ ಭಾರತ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಅವರು ಸಫಲರಾಗುತ್ತಾರೆ. ಪ್ರಸ್ತುತ ಅವರು ಮಧ್ಯಪ್ರದೇಶ ಕೇಡರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.