ಬೆಂಗಳೂರು, ಜೂ 14 (Daijiworld News/MSP): ಐಎಂಎ ಕಂಪನಿಯ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕಂಪನಿಯ ಆಡಿಟರ್ ಇಕ್ಬಾಲ್ ಖಾನ್ ಅವರನ್ನು ಎಸ್ಐಟಿ ತಂಡ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್ ಬೆಂಗಳೂರಿನ ಫ್ರೆಜರ್ ಟೌನ್ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಕಂಪನಿಯ ಲೆಕ್ಕ ತಪಾಸಣೆ ನಡೆಸುತ್ತಿದ್ದರು.
ಕಂಪನಿಯ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಇಕ್ಬಾಲ್ ಖಾನ್ ನಾಪತ್ತೆಯಾಗಿದ್ದ. ಬುಧವಾರವಷ್ಟೇ ಸಂಸ್ಥೆಯ ಏಳು ಜನ ನಿರ್ದೇಶಕರಾದ ನಿಜಾಮುದ್ದೀನ್ ಖಾನ್, ನಾಸಿರ್ ಹುಸೇನ್, ನವೀದ್ ಅಹ್ಮದ್, ಅರ್ಷದ್ ಖಾನ್, ವಾಸಿಂ, ಅನ್ಸರ್ ಪಾಷಾ ಮತ್ತು ದಾದಾ ಪೀರ್ ಅವರನ್ನು ಕರ್ಮಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದರು. ಗುರುವಾರ ನ್ಯಾಯಾಲಯ ಅವರನ್ನು 10 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿತ್ತು.
ಸಾವಿರಾರು ಜನರಿಂದ ಷೇರು ಸಂಗ್ರಹಿಸಿರುವ ಐಎಂಎ ಸಮೂಹ ಕಂಪನಿ ರೂ 1,230 ವಂಚಿಸಿರುವ ಸಂಗತಿ ವಿಶೇಷ ತನಿಖಾ ದಳದ ಪ್ರಾರ್ಥಮಿಕ ತನಿಖೆಯಿಂದ ಗೊತ್ತಾಗಿದೆ.