ಬೆಂಗಳೂರು, ಮಾ.07 (DaijiworldNews/AK) :ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸ್ರ್ ಅನ್ನು ತಡೆಗಟ್ಟಲು ಪ್ರಥಮ ಹಂತದಲ್ಲಿ ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ20 ತಾಲ್ಲೂಕುಗಳಲ್ಲಿ 9 ಕೋಟಿ ರೂ. ವೆಚ್ಚದಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆಯನ್ನು ನೀಡಲಾಗುವುದು ಎಂದು ಸಿಎಂ ಇಂದಿನ ಬಜೆಟ್ನಲ್ಲಿ ಘೋಷಿಸಿದ್ದಾರೆ.

ಅಲ್ಲದೇ ಗೃಹ ಆರೋಗ್ಯʼ ಯೋಜನೆಯಡಿ 2024-25 ನೇ ಸಾಲಿನಲ್ಲಿ ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.
ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವುದರ ಮೂಲಕ ʻಆರೋಗ್ಯ ಕವಚʼ ಸೇವೆಯನ್ನು ಬಲಪಡಿಸಲಾಗುವುದು ಎಂದರು.
ಸಾಂಕ್ರಾಮಿಕ ರೋಗಗಳಾದ ಚಿಕೂನ್ಗುನ್ಯ, ಡೆಂಗ್ಯೂ ಹಾಗೂ ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾಸನೂರು ಕಾಡಿನ ಖಾಯಿಲೆಗಳ (KFD) ಪರಿಣಾಮಕಾರಿ ನಿಯಂತ್ರಣಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು.
ʻಶ್ರವಣ ಸಂಜೀವಿನಿʼ ಯೋಜನೆಯಡಿ ಮಕ್ಕಳಲ್ಲಿ ಕಂಡುಬರುವ ಶ್ರವಣದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯರ್ ಇಂಪ್ಲಾಂಟ್ (Cochlear Implant) ಶಸ್ತ್ರ ಚಿಕಿತ್ಸೆ ಹಾಗೂ ಇಂಪ್ಲಾಂಟ್ಗಳ ಬಿಡಿಭಾಗಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆ ಮಾಡಲು 12 ಕೋಟಿ ರೂ. ಒದಗಿಸಲಾಗುವುದು.
ಹೆಚ್ಚಿನ ಟಿ.ಬಿ ಪ್ರಕರಣಗಳಿರುವ ಆರೋಗ್ಯ ಕೇಂದ್ರಗಳಿಗೆ 2025-26ನೇ ಸಾಲಿನಲ್ಲಿ 100 True-NAT machine ಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ