ಕೋಲ್ಕತಾ,ಜೂ14(Daijiworldnews/AZM): ಪಶ್ಚಿಮ ಬಂಗಾಳದಲ್ಲಿರುವವರು ಬಂಗಾಳಿ ಭಾಷೆ ಮಾತನಾಡಬೇಕು. ಭಾಷೆ ಕಲಿಯದವರು ಬಂಗಾಳದಲ್ಲಿರಬಾರದು ಎಂದು ಮಮತಾ ಬ್ಯಾನರ್ಜಿ ತಾಕೀತು ಮಾಡಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯ ಹಿಂದೆ ಬಂಗಾಳಿಯೇತರ ಜನರ ಕೈವಾಡ ಇದೆ ಎಂಬುದು ಮುಖ್ಯಮಂತ್ರಿಗಳ ಶಂಕೆಯಾಗಿದ್ದ ಹಿನ್ನಲೆ ಈ ಹೇಳಿಕೆಯನ್ನು ಅವರು ನೀಡಿದ್ದಾರೆ. ಕಾಂಚರಪಾರಾ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ದೀದಿ, ವೈದ್ಯರ ಪ್ರತಿಭಟನೆಯ ಕಿಡಿ ಹಚ್ಚಿದ್ದು ಹೊರಗಿನವರೇ ಎಂದು ಆರೋಪಿಸಿದರು.
“ವೈದ್ಯರಿಗೆ ಹೊರಗಿನವರು ಪ್ರಚೋದನೆ ನೀಡುತ್ತಿದ್ದಾರೆ. ನಿನ್ನೆಯ ಪ್ರತಿಭಟನೆಯಲ್ಲಿ ಹೊರಗಿನವರು ಪಾಲ್ಗೊಂಡಿದ್ದರೆಂದು ನಾನು ಹೇಳಿದ್ದು ನಿಜ. ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಹೊರಗಿನವರು ಘೋಷಣೆಗಳನ್ನ ಕೂಗುತ್ತಿದ್ದುದನ್ನು ನಾನು ನೋಡಿದ್ದೆ” ಎಂದು ಟಿಎಂಸಿ ಪಕ್ಷದ ಮುಖ್ಯಸ್ಥೆಯೂ ಆದ ಅವರು ಹೇಳಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬಂಗಾಳದಲ್ಲಿ ಯಾರಾದರೂ ವಾಸಿಸುತ್ತಿದ್ದರೆ ಅವರು ಬಂಗಾಳಿ ಭಾಷೆಯನ್ನು ಕಲಿಯಬೇಕು” ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ಬಂಗಾಳದಲ್ಲಿ ಬಿಜೆಪಿಯು ಬಂಗಾಳಿ ಹಾಗೂ ಅಲ್ಪಸಂಖ್ಯಾತರನ್ನು ಗುರಿ ಮಾಡಿದೆ ಎಂದು ಟೀಕಿಸಿದ್ದಾರೆ.
ಇನ್ನು, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಗ್ಗೆ ಮಾತನಾಡಿದ ಮಮತಾ, ಇವಿಎಂ ಮೆಷೀನ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇವಿಎಂ ಮೆಷೀನ್ಗಳನ್ನ ಪ್ರೋಗ್ರಾಮಿಂಗ್ ಮಾಡಿ ಅವರು ಕೆಲ ಸೀಟುಗಳನ್ನು ಗೆದ್ದ ಮಾತ್ರಕ್ಕೆ ಬಂಗಾಳಿಗಳು ಹಾಗೂ ಅಲ್ಪಸಂಖ್ಯಾತರನ್ನು ಹೊಡೆಯುವುದು ಬಡಿಯುವುದು ಮಾಡುವುದು ಸರಿಯಲ್ಲ. ನಾವು ಇದನ್ನು ಸಹಿಸುವುದಿಲ್ಲ” ಎಂದು ಮಮತಾ ತಿಳಿಸಿದರು.