ಬೆಂಗಳೂರು, ಮಾ.08 (DaijiworldNews/AA): ಗಂಗಾವತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಪ್ರಕರಣದ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, "ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ ಹೇಯ ಕೃತ್ಯ. ಘಟನೆ ವರದಿಯಾದ ಕೂಡಲೇ ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸೂಚಿಸಿದ್ದೆ. ಪ್ರಕರಣದ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ" ಎಂದು ತಿಳಿಸಿದ್ದಾರೆ.
ಜೊತೆಗೆ "ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು" ಎಂದು ಸಿಎಂ ಹೇಳಿದ್ದಾರೆ.
ಘಟನೆ ಹಿನ್ನೆಲೆ:
ಕೊಪ್ಪಳದ ಗಂಗಾವತಿ ತಾಲೂಕಿನ ಸಣಾಪುರದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಗುರುವಾರ ರಾತ್ರಿ ಪ್ರವಾಸಿಗರ ಜೊತೆ ಸ್ಥಳೀಯ ಯುವಕರು ಗಲಾಟೆ ನಡೆಸಿ, ಅವರ ಹಲ್ಲೆ ಮಾಡಿದ್ದರು. ಈ ಸಂದರ್ಭದಲ್ಲಿ ಮೂವರು ಪ್ರವಾಸಿಗರನ್ನು ಕಾಲುವೆಗೆ ತಳ್ಳಿದ್ದ ಆರೋಪಿಗಳು, ಇಸ್ರೇಲ್ ಮಹಿಳೆ ಹಾಗೂ ಅವರ ಜೊತೆಯಲ್ಲಿದ್ದ ಹೋಂ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿತ್ತು.
ಕಾಲುವೆಗೆ ತಳ್ಳಲ್ಪಟ್ಟ ಮೂವರಲ್ಲಿ ಅಮೆರಿಕದ ಡೇನಿಯಲ್ ಹಾಗೂ ಮಹಾರಾಷ್ಟ್ರದ ಪಂಕಜ್ ಎಂಬವರು ಈಜಿ ದಡ ಸೇರಿದ್ದರು. ಆದರೆ ಒಡಿಶಾ ಮೂಲದ ಪ್ರವಾಸಿಗ ಬಿಬಾಸ್ (42) ಎಂಬವರು ಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಇಂದು ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು.
ಈ ಸಂಬಂಧ ಮಹಿಳೆಯರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಬಳಿಕ ಗಂಗಾವತಿ ಸಾಯಿನಗರದ ಗೌಂಡಿ ಕೆಲಸ ಮಾಡುವ ಮಲ್ಲೇಶ ಅಲಿಯಾಸ್ ಹಂದಿ ಮಲ್ಲೇಶ ಅಯ್ಯಪ್ಪ ದಾಸರ (22) ಹಾಗೂ ಮಿಷನ್ ಕೆಲಸ ಮಾಡುವ ಚೇತನಸಾಯಿ ಕಾಮೇಶ್ವರ ರಾವ್ (21) ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಹಾಗೂ ನಾಪತ್ತೆಯಾದ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.