ಬೆಂಗಳೂರು, ಜೂ15(Daijiworld News/SS): ರೈತರಿಗೆ ಮತ್ತೆ ಬೆಳೆ ಸಾಲ ಪಡೆಯಲು ಬ್ಯಾಂಕ್ಗಳು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಬ್ಯಾಂಕರುಗಳೊಂದಿಗೆ ಚರ್ಚೆ ನಡೆಸಿದ ವೇಳೆ ಅವರು ಮಾತನಾಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಕರ್ನಾಟಕ 12 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ಪರಿಣಾಮ, ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬ್ಯಾಂಕ್ಗಳು ರೈತರ ಬಗ್ಗೆ ಸ್ವಲ್ಪ ಮೃದು ಧೋರಣೆಯನ್ನು ಅನುಸರಿಸಬೇಕು ಎಂದು ಹೇಳಿದರು.
ಸಾಲ ಮನ್ನಾ ಯೋಜನೆಯಡಿ 4 ವರ್ಷಗಳಲ್ಲಿ ಹಂತ ಹಂತವಾಗಿ ಬ್ಯಾಂಕ್ಗಳಿಗೆ ಮೊತ್ತ ಪಾವತಿಸುವುದಾಗಿ ತಿಳಿಸಲಾಗಿತ್ತು. ಆದರೆ ಒಂದೇ ವರ್ಷದೊಳಗಾಗಿ ಎಲ್ಲ ಅರ್ಹ ಖಾತೆಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಂಪೂರ್ಣ ಮೊತ್ತ ಪಾವತಿ ಮಾಡಲಾಗಿದೆ. ಆದ್ದರಿಂದ ಈ ರೈತರಿಗೆ ಮತ್ತೆ ಬೆಳೆ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ ಎನ್ಪಿಎ ಸಾಲಗಳ ಮನ್ನಾ ಮೊತ್ತ ಬಿಡುಗಡೆಗೆ ಸರ್ಕಾರಿ ಆದೇಶ ಹೊರಡಿಸಿದ್ದು, ಈ ತಿಂಗಳೊಳಗಾಗಿ ಎಲ್ಲ ಬ್ಯಾಂಕುಗಳ ಎಲ್ಲ ಅರ್ಹ ಫಲಾನುಭವಿಗಳ ಸಾಲ ಖಾತೆಗೆ ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ.
ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ನಡೆದ ಈ ಸಭೆಯಲ್ಲಿ 14 ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.