ಬೆಂಗಳೂರು, ಜೂ15(Daijiworld News/SS): ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ತಾವು ರಾಜ್ಯದ ಮುಖ್ಯಮಂತ್ರಿ ಆಗಬೇಕು ಅಂತಾ ಯಡಿಯೂರಪ್ಪ ಇಟ್ಟುಕೊಂಡಿರುವ ಆಸೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೊಂದು ವರ್ಷದಿಂದಲೂ ಯಡಿಯೂರಪ್ಪನವರು ಇದೇ ರೀತಿ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ನಾವು ಯಡಿಯೂರಪ್ಪನವರ ಭವಿಷ್ಯವನ್ನೂ ನೋಡಿದ್ದೇವೆ, ಬಿಜೆಪಿ ನಾಯಕರ ಭವಿಷ್ಯವನ್ನೂ ನೋಡಿದ್ದೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ನಮ್ಮ ಮಿತ್ರರು. ಈ ಮೊದಲು ಮಿತ್ರ ಪಕ್ಷದ ಶಾಸಕರು ಒಬ್ಬರಿಗೊಬ್ಬರು ಪರಸ್ಪರ ಹೊಡೆದಾಡಿಕೊಂಡು ಸರ್ಕಾರ ಬೀಳುತ್ತದೆ ಎಂದು ಹೇಳಿಕೆ ನೀಡಿದ್ದರು. ಸರ್ಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಸಂತೋಷ ಸಿಗುವುದಾದರೆ ಸಿಗಲಿ, ನಮಗೇನೂ ಬೇಸರವಿಲ್ಲ ಎಂದು ಹೇಳಿದರು.
ಪ್ರಾಮಾಣಿಕವಾಗಿರುವ ಹಿರಿಯ ನಾಯಕರಿಗೂ ಮುಂದೆ ಖಂಡಿತ ಅವಕಾಶವಿದೆ. ಪಕ್ಷ ಉಳಿಯಬೇಕು ಎನ್ನುವ ಉದ್ದೇಶದಿಂದ ನಾವು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ. ಪಕ್ಷ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಸುಗಮವಾಗಿ ನಡೆಯಬೇಕಾದರೆ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.