ಚಿಕ್ಕಮಗಳೂರು, ಮಾ.11(DaijiworldNews/AK): ರಾಜ್ಯವು ಅಭಿವೃದ್ಧಿಯೇ ಕಾಣದ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದೆ; ಈ ಸರಕಾರದ ಆಡಳಿತವೈಖರಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.

ಬಾಳೆಹೊನ್ನೂರಿನಲ್ಲಿ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕಾಂಗ್ರೆಸ್ ಸರಕಾರವು ಅಧಿಕಾರ ವಹಿಸಿಕೊಂಡು 20 ತಿಂಗಳಾಗಿದೆ. ರಸ್ತೆಗಳು, ಆಸ್ಪತ್ರೆಗಳು, ಶಾಲಾ ಕೊಠಡಿಗಳನ್ನೂ ಕೊಡದ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಆಕ್ಷೇಪಿಸಿದರು.
ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಅನುದಾನ ನೀಡದ ಕಾರಣ ಶಾಸಕರು ಒಂದುರೀತಿ ಅಸಹಾಯಕರಾಗಿದ್ದಾರೆ. ಕ್ಷೇತ್ರಗಳಲ್ಲಿ ಓಡಾಡಲಾಗದ ಸ್ಥಿತಿ ಇದೆ ಎಂಬ ಭಾವನೆಯನ್ನು ಆಡಳಿತ ಪಕ್ಷದ ಶಾಸಕರೂ ತೋಡಿಕೊಂಡಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ರನ್ಯಾರಾವ್ ಚಿನ್ನ ಸ್ಮಗ್ಲಿಂಗ್ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಬಗೆಗಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಹಳ ಪ್ರಮುಖ ಪತ್ರಿಕೆಗಳಲ್ಲೂ ಈ ವಿಷಯ ಪ್ರಕಟಗೊಂಡಿದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಇಂಥ ಗಂಭೀರ ಪ್ರಕರಣವು ಯಾರದೋ ಬೆಂಬಲ ಇಲ್ಲದೆ ಆಗಲು ಸಾಧ್ಯ ಇಲ್ಲ ಎಂದು ತಿಳಿಸಿದರು.
ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮಗಳು ಎಂಬುದು ಒಂದು ಕಡೆಯಾದರೆ, ಸಚಿವರ ಬೆಂಬಲದ ವಿಷಯವೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸತ್ಯಾಂಶ ತನಿಖೆ ನಂತರ ಹೊರಕ್ಕೆ ಬರಲಿದೆ ಎಂದು ಹೇಳಿದರು.