ಹೊಸದಿಲ್ಲಿ, ಜೂ15(Daijiworld News/SS): ಮುಂದಿನ ದಿನಗಳಲ್ಲಿ ಸುಳ್ಳು ಸುದ್ದಿ, ಪ್ರಚೋದನೆಕಾರಿ ಸಂದೇಶಗಳನ್ನು ಹರಡಲು ವಾಟ್ಸ್ ಆ್ಯಪ್ ಅನ್ನು ದುರ್ಬಳಕೆ ಮಾಡಿದರೆ, ಅವರ ವಿರುದ್ಧ ಕೋರ್ಟ್ ಕೇಸ್ ದಾಖಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಲೋಕಸಭೆ ಚುನಾವಣೆಗಳ ಸಂದರ್ಭ ವಾಟ್ಸ್ ಆ್ಯಪ್ ಅತೀ ಹೆಚ್ಚು ದುರ್ಬಳಕೆಯಾಗಿರುವುದರ ಬಗ್ಗೆ ವರದಿಗಳು ಪ್ರಕಟವಾದ ನಂತರ ಕಂಪನಿ ಈ ನಿರ್ಧಾರಕ್ಕೆ ಬಂದಿದೆ. ವಾಟ್ಸ್ ಆ್ಯಪ್ನ ಉತ್ಪನ್ನಗಳು ಯಾವುದೇ ಸುಳ್ಳು ಸುದ್ದಿ, ಹಿಂಸಾತ್ಮಕ ಸಂದೇಶ ರವಾನಿಸಲು ತಯಾರಿಸಿದ್ದಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ವಾಟ್ಸ್ ಆ್ಯಪ್ನಲ್ಲಿ ಹಿಂಸಾತ್ಮಕ ಸಂದೇಶ, ಸುಳ್ಳು ಸುದ್ದಿಗಳನ್ನು ಸಾಮೂಹಿಕವಾಗಿ ಎಲ್ಲರಿಗೂ ಕಳಿಸುವುದು, ಸಾಮಾಜಿಕ ಶಾಂತಿಯನ್ನು ಕದಡಬಲ್ಲ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವವರು ಸೇರಿದಂತೆ ವಾಟ್ಸ್ ಆ್ಯಪ್ ದುರ್ಬಳಕೆ ಮಾಡುವ ಕಂಪನಿಗಳ ವಿರುದ್ಧ ಡಿಸೆಂಬರ್ 7ರಿಂದ ಕಾನೂನು ಕ್ರಮ ಜರುಗಿಸುವುದಾಗಿ ವಾಟ್ಸ್ ಆ್ಯಪ್ ತಿಳಿಸಿದೆ.
ಈಗಾಗಲೇ ಅಕ್ರಮ ಬಳಕೆಯನ್ನು ತಡೆಯಲು ರೂಪಿಸಿರುವ ನೀತಿಗಳನ್ನು ವಾಟ್ಸ್ ಆ್ಯಪ್ ಪರಿಷ್ಕರಿಸಿದ್ದು, ಅಕ್ರಮವಾಗಿ ಹಿಂಸಾತ್ಮಕ ಮೆಸೇಜ್ಗಳನ್ನು ಒಮ್ಮೆಗೇ ಎಲ್ಲರಿಗೂ ಕಳಿಸುವುದು ಅಥವಾ ಪ್ರಚೋದನಕಾರಿ ಆಟೊಮೇಟೆಡ್ ಮೆಸೇಜ್ಗಳನ್ನು ರವಾನಿಸುವುದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.