ಚೆನ್ನೈ ,ಮಾ.13 (DaijiworldNews/AK): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 2025-26 ರ ರಾಜ್ಯ ಬಜೆಟ್ನಲ್ಲಿ ರೂಪಾಯಿಯ ಅಧಿಕೃತ ಚಿಹ್ನೆ ‘₹’ ಕೈ ಬಿಟ್ಟಿದ್ದು ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯಿಂದ ‘ರು’ ಅನ್ನು ಆಯ್ಕೆ ಮಾಡಿಕೊಂಡು ಹೊಸ ಚರ್ಚೆಗೆ ವೇದಿಕೆಯಾಗಿದೆ.

ನಾಳೆ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವ ರಾಜ್ಯ ಬಜೆಟ್ನ ಲೋಗೋವನ್ನು ಅನ್ನು ಸ್ಟಾಲಿನ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವ, ತಮಿಳುನಾಡಿನ ವ್ಯಾಪಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಬಜೆಟ್ ಎಂದು ಬರೆದುಕೊಂಡಿದ್ದಾರೆ.
ಹಿಂದಿನ ಎರಡು ಬಜೆಟ್ಗಳಲ್ಲಿ, ರಾಜ್ಯವು ತನ್ನ ಲೋಗೋಗಳಿಗಾಗಿ ರೂಪಾಯಿ ಚಿಹ್ನೆಯನ್ನು ಬಳಸಿತ್ತು. 2023-24ರ ಬಜೆಟ್ನಲ್ಲಿಯೂ ಸಹ ಈ ಚಿಹ್ನೆಯನ್ನು ಪ್ರಮುಖವಾಗಿ ತೋರಿಸಲಾಗಿತ್ತು, ಇದನ್ನು ಐಐಟಿ-ಗುವಾಹಟಿಯ ಪ್ರಾಧ್ಯಾಪಕರೊಬ್ಬರು ವಿನ್ಯಾಸಗೊಳಿಸಿದ್ದರು. ‘₹’ ಯಲ್ಲಿ ಹಿಂದಿಯ ‘ರಾ’ ಹೋಲಿಕೆ ಇರುವ ಹಿನ್ನೆಲೆಯಲ್ಲಿ ಬಳಸದಿರಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಕರೆನ್ಸಿ ಚಿಹ್ನೆಯನ್ನು ರಾಜ್ಯವೊಂದು ತಿರಸ್ಕರಿಸಿರುವುದು ಇದೇ ಮೊದಲು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಒತ್ತಾಯದ ಮೂಲಕ 'ಹಿಂದಿ ಹೇರಿಕೆ' ಕುರಿತು ಬಿಜೆಪಿ ನೇತೃತ್ವದ ಕೇಂದ್ರದೊಂದಿಗೆ ಆಡಳಿತಾರೂಢ ಡಿಎಂಕೆ ಹೋರಾಟದ ಮಧ್ಯೆ ಕರೆನ್ಸಿ ಚಿಹ್ನೆಯನ್ನು ಬದಲಾಯಿಸುವ ನಿರ್ಧಾರ ಬಂದಿದೆ.