ಲಖನೌ, ಮಾ.13 (DaijiworldNews/AA): ಆಡಳಿತರೂಢ ಬಿಜೆಪಿ ದೇಶವನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ದುರ್ಬಲಗೊಳಿಸಿದೆ. ಸಮಾಜದಲ್ಲಿ ದ್ವೇಷ ಹರಡುತ್ತಿರುವುದರಿಂದ ದೇಶ ದುರ್ಬಲವಾಗಿದೆ. ಬಿಜೆಪಿಯವರ ನಡವಳಿಕೆ, ಭಾಷೆ ಸಮಾಜವನ್ನು ದುರ್ಬಲಗೊಳಿಸುತ್ತಿದೆಯಲ್ಲದೆ, ಬಿರುಕನ್ನೂ ಮೂಡಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಬೇರೆಯವರಿಗೆ ನೀಡುವ ಮೂಲಕ ಇಡೀ ಮಾರುಕಟ್ಟೆಯನ್ನು ಅವರು ಬಲಹೀನಗೊಳಿಸಿದ್ದಾರೆ. ಮಾರುಕಟ್ಟೆ ನಿಮ್ಮ ಕೈಯಲ್ಲಿ ಇಲ್ಲದೇ ಇರುವಾಗ ಉದ್ಯಮ ನಡೆಸಲು ಮುಂದೆ ಬರುವವರು ಯಾರು? ಬೇರೆಯವರು ನಮ್ಮ ದೇಶಕ್ಕೆ ಬಂದು ಇಡೀ ಮಾರುಕಟ್ಟೆಯನ್ನೇ ತಮ್ಮದಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ, ಅವರನ್ನು 'ತೀಸ್ ಮಾರ್ ಖಾನ್' ಎಂದು ಜರಿದಿರುವ ಅಖಿಲೇಶ್ ಯಾದವ್ ನಮ್ಮ ಮುಖ್ಯಮಂತ್ರಿ ತೀಸ್ ಮಾರ್ ಖಾನ್. ಯಾಕೆಂದರೆ ನಮ್ಮ ಮುಖ್ಯಮಂತ್ರಿ 30 ಸಂಖ್ಯೆಯನ್ನು ಇಷ್ಟಪಡುತ್ತಾರೆ ಎಂದಿದ್ದಾರೆ.
ಕುಂಭಮೇಳದಲ್ಲಿ ಸತ್ತವರ ಸಂಖ್ಯೆ ಕೇಳಿದರೆ 30 ಎನ್ನುತ್ತಾರೆ. ಎಷ್ಟು ವ್ಯವಹಾರ ಆಯಿತು ಎಂದರೆ 30 ಕೋಟಿ ರೂ. ಎನ್ನುತ್ತಾರೆ. ಇಂತಹ ತೀಸ್ ಮಾರ್ ಖಾನ್ ಲೆಕ್ಕವನ್ನು ನಮ್ಮ ಮುಖ್ಯಮಂತ್ರಿಯವರಲ್ಲದೆ ಬೇರೆಯವರು ಕೊಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.