ದೆಹಲಿ, ಜೂ15(Daijiworld News/SS): ಅಯೋಧ್ಯೆಯಲ್ಲಿ ಉಗ್ರರಿಂದ ದಾಳಿ ನಡೆಯುವ ಸಾಧ್ಯತೆಯ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ, ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉಗ್ರ ದಾಳಿ ನಡೆಯುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ನೇಪಾಳದಿಂದ ಉಗ್ರರು ಉತ್ತರ ಪ್ರದೇಶದೊಳಕ್ಕೆ ನುಗ್ಗುವ ಸಾಧ್ಯತೆಯಿದ್ದು, ದಾಳಿಯ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಅಯೋಧ್ಯೆಯಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಹೆಚ್ಚಿನ ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದ್ದು, ಸಂಶಯಾಸ್ಪದ ನಡೆಗಳು ಕಂಡು ಬಂದಲ್ಲಿ ಕೂಡಲೇ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ಮಾತ್ರವಲ್ಲ, ನೆರೆ ರಾಜ್ಯದಿಂದ ಉತ್ತರ ಪ್ರದೇಶಕ್ಕೆ ಬರುವ ಮತ್ತು ಉತ್ತರ ಪ್ರದೇಶದ ಇತರ ನಗರಗಳಿಂದ ಅಯೋಧ್ಯೆಗೆ ಬರುವ ಬಸ್ಸು, ರೈಲುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಖಾಸಗಿ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ 16ರಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಪಕ್ಷದ 18 ಸಂಸದರು ಅಯೋಧ್ಯೆಗೆ ತೆರಳಲಿದ್ದಾರೆ. ಈ ಬೆನ್ನಲ್ಲೇ ಉಗ್ರದಾಳಿಯ ಕುರಿತು ಮಾಹಿತಿ ಲಭ್ಯವಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.