ಬಳ್ಳಾರಿ, ಜೂ 15 (Daijiworld News/MSP): ಬಳ್ಳಾರಿಯ ಕೌಲ್ ಬಜಾರ್ ಠಾಣೆಯಲ್ಲಿ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್.ರಂಗನಾಥ್ ಸೇರಿ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಹಲ್ಲೆ ಆರೋಪದ ಮೇಲೆ ಈ ದೂರನ್ನು ವಿಮ್ಸ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ವಿ.ಕೆ.ಯಾದವಾಡ ಎಂಬವರು ದಾಖಲಿಸಿದ್ದಾರೆ. ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್.ರಂಗನಾಥ್, ಬಳ್ಳಾರಿ ವರದಿಗಾರ ವೀರೇಶ್ದಾನಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ವಿಮ್ಸ್ ವೈದ್ಯರಾದ ಡಾ.ರವಿ ಭೀಮಪ್ಪ, ಡಾ.ಶಡ್ರಕ್, ಶುಶ್ರೂಷಕ ವಿಭಾಗ ಹನುಮಂತರಾಯ ಹಾಗೂ ಉಷಾ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ
ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ವಿ.ಕೆ.ಯಾದವಾಡ, ಜೂ.12ರಂದು ಈ ಘಟನೆ ನಡೆದಿದ್ದು, ಅಂದು ರಾತ್ರಿ ವೇಳೆಗೆ ಲ್ಯಾಬ್ಗೆ ಬಂದ ಉಷಾ ಎಂಬವರು ಎದೆನೋವಿನ ಎಂದು ತಿಳಿಸಿ, ಬ್ಲಡ್ ಚೆಕಪ್ ಮಾಡುವಂತೆ ಹೇಳಿದರು. ನಾನು ಅವರ ರಕ್ತದ ಮಾದರಿ ಸಂಗ್ರಹಿಸಿದ ನಂತರ ಏಕಾಏಕಿ ಅವರು ನನ್ನ ಕೈ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜೊತೆಗೆ, ಅವರೊಂದಿಗೆ ಇದ್ದ ಐವರು ನನ್ನನ್ನು ನಿಂದಿಸಿ, ಹಲ್ಲೆ ನಡೆಸಿ, ನಗದು, ಚಿನ್ನಾಭರಣ, ಮೊಬೈಲ್ ಕಸಿದು ಪರಾರಿಯಾದರು ಎಂದು ಆರೋಪಿಸಿದ್ದಾರೆ.
ನಾನು ಈ ಹಿಂದೆ 2015 ರಲ್ಲಿ ಪಬ್ಲಿಕ್ ಟಿವಿಯಲ್ಲಿ ಪ್ರಕಟವಾದ ವರದಿಯೊಂದಕ್ಕೆ ಸಂಬಂಧಟ್ಟಂತೆ 2016ರ ಸಾಲಿನಲ್ಲಿ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಈ ಹಿನ್ನಲೆಯಲ್ಲಿ ಅವರು ಅದನ್ನು ರದ್ದು ಮಾಡುವಂತೆ ಅವರು ಧಾರವಾಡ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಬಳಿಕ ಹೈಕೋರ್ಟ್ ಪೀಠ ಅದನ್ನು ರದ್ದು ಮಾಡಿತ್ತು. ನಂತರ, ಅವರೆಲ್ಲಾ ಈ ಕುರಿತು ಸ್ಪಷ್ಟನ್ರ್ ನೀಡುವಂತೆ ನಗರದ ನ್ಯಾಯಾಲಯ ಸೂಚಿಸಿ ಈ ಕುರಿತು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದೇ ಹಿನ್ನಲೆಯಲ್ಲಿ ನನ್ನ ಕಾರಣವನ್ನಿಟ್ಟುಕೊಂಡು ದ್ವೇಷದಿಂದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ದೂರಿದ್ದಾರೆ.