ಕೋಲ್ಕತ, ಜೂ15(Daijiworld News/SS): ಪಶ್ಚಿಮ ಬಂಗಾಳದ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 700ಕ್ಕೂ ಮಿಕ್ಕಿ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುವುದರೊಂದಿಗೆ ಬಿಕ್ಕಟ್ಟು ಮತ್ತಷ್ಟೂ ಬಿಗಡಾಯಿಸಿದೆ.
ಪಶ್ಚಿಮ ಬಂಗಾಳದಲ್ಲಿ ಸರಕಾರದ ಜತೆ ವೈದ್ಯರ ಸಂಘರ್ಷ ತೀವ್ರಗೊಂಡಿದ್ದು, ಮುಷ್ಕರ ನಿರತ ಕಿರಿಯ ವೈದ್ಯರಿಗೆ ಬೆಂಬಲ ಸೂಚಿಸಿ 700ಕ್ಕೂ ಹೆಚ್ಚು ಸರಕಾರಿ ವೈದ್ಯರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ರಾಜ್ಯದ ಆರೋಗ್ಯಪಾಲನೆ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶಾದ್ಯಂತ ಸರಕಾರಿ ವೈದ್ಯರು, ದಾದಿಯರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಕೋಲ್ಕೊತಾದಲ್ಲಿ ವೈದ್ಯರಿಗೂ ಸಾರ್ವಜನಿಕರಿಗೂ ಘರ್ಷಣೆ ನಡೆದಿದೆ.
ಜೂನ್ 10ರಂದು ಕೋಲ್ಕೊತಾದ ಎನ್ಆರ್ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾರ್ಯನಿರತ ಕಿರಿಯ ವೈದ್ಯರೊಬ್ಬರ ಮೇಲೆ ಮೃತ ರೋಗಿಯ ಕುಟುಂಬಿಕರು ದಾಳಿ ನಡೆಸಿದ್ದನ್ನು ವೈದ್ಯರು ಪ್ರತಿಭಟಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ವೈದ್ಯರ ನೋವನ್ನು ಅರ್ಥ ಮಾಡಿಕೊಳ್ಳದೆ ಅವರನ್ನೇ ಅಪರಾಧಿಗಳಂತೆ ಬಿಂಬಿಸಿದ್ದರಿಂದ ವೈದ್ಯರು ಕ್ರುದ್ಧರಾಗಿದ್ದು, ಪ್ರಕರಣ ವಿಕೋಪಕ್ಕೆ ಹೋಗಿದೆ.
ಇದೀಗ ಪಶ್ಚಿಮ ಬಂಗಾಳದಲ್ಲಿ ಆರಂಭವಾದ ವೈದ್ಯರ ಮುಷ್ಕರ ಇದೀಗ ದೇಶಾದ್ಯಂತ ವ್ಯಾಪಿಸಿದೆ. ಈವರೆಗೆ ಪ. ಬಂಗಾಳದಲ್ಲಿ ರಾಜ್ಯ ಸರಕಾರವಾಗಲಿ, ಮುಖ್ಯಮಂತ್ರಿಯಾಗಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ತಿಳಿದುಬಂದಿದೆ.