ಉತ್ತರ ಪ್ರದೇಶದ, ಜೂ 15 (Daijiworld News/MSP): ಹೊಸ ತಳಿಯ ಮಾವಿನ ಹಣ್ಣಿಗೆ " ಶಾ ಮ್ಯಾಂಗೊ " ಎಂದು ಹೆಸರಿಸಲಾಗಿದೆ. ಹೀಗೊಂದು ಹೆಸರು ಇಟ್ಟವರು ಉತ್ತರ ಪ್ರದೇಶದ ಮಲಿಹಾಬಾದ್ನವರಾದ ಮ್ಯಾಂಗೋ ಮ್ಯಾನ್ ಎಂದೇ ಪ್ರಸಿದ್ದಿಯ ಮಾವು ಬೆಳೆಗಾರ ಹಾಜಿ ಕಲಿಮುಲ್ಲಾ ಅವರು.
ಅವರು ಈ ಮಾವಿನ ಹಣ್ಣಿಗೆ ಹೀಗೊಂದು ಹೆಸರಿಡಲು ಕಾರಣವಿದೆಯಂತೆ, ಅಮಿತ್ ಶಾ ಅವರ ವ್ಯಕ್ತಿತ್ವ ಕಲಿಮುಲ್ಲಾ ಅವರ ಮೇಲೆ ಪ್ರಭಾವ ಬೀರಿದ್ದು, ಶಾ ಅವರಿಗೆ ಸಮಾಜವನ್ನು ಒಗ್ಗೂಡಿಸುವ ಮತ್ತು ಎಲ್ಲರನ್ನೂ ಒಂದೇ ವೇದಿಕೆಯಡಿ ಸೇರಿಸುವ ಸಾಮರ್ಥ್ಯ ಇದೆ ಎಂದು ಅಮಿತ್ ಶಾ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಹೀಗಾಗಿ ಈ ಹೊಸ ತಳಿಯ ವಿಶಿಷ್ಟ ರುಚಿಯ ಮಾವಿನ ಹಣ್ಣಿಗೆ " ಶಾ ಮಾವು " ಎಂಬ ಹೆಸರಿರಿಸಿದ್ದಾರಂತೆ.
ಹಾಗೆಂದು ವಿಐಪಿ ಹೆಸರನ್ನು ಮಾವಿನ ಹಣ್ಣಿಗೆ ಇಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ನೂತನ ಮಾವು ತಳಿಗೆ ವಿಐಪಿ ಹೆಸರುಗಳನ್ನು ಇಟ್ಟು ಸುದ್ದಿಯಾಗಿದ್ದರು. ಮಾವು ಬೆಳೆಗಾರ ಹಾಜಿ ಕಲಿಮುಲ್ಲಾ, ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ತಾರೆ ಐಶ್ವರ್ಯ ರೈ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರ ಹೆಸರುಗಳನ್ನು ತಾವು ಬೆಳೆದ ಹೊಸ ಮಾವು ತಳಿಗೆ ಇಟ್ಟಿದ್ದಾರೆ.
ಪದ್ಮಶ್ರೀ ಪುರಸ್ಕೃತ ಹಾಜಿ ಕಲಿಮುಲ್ಲಾ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಒಂದು ಮಾವಿನ ತಳಿಗೆ ಇರಿಸಿದ್ದಾರೆ. ನೋಡಲು ಸುಂದರವಾಗಿರುವ, ಉತ್ತಮ ರುಚಿ ಹೊಂದಿರುವ, ಹಣ್ಣಿನ ಸಿಪ್ಪೆಯಲ್ಲಿ ವಿಶೇಷ ಗೆರೆಗಳನ್ನು ಹೊಂದಿರುವ ಮಾವಿನ ಹಣ್ಣಿನ ತಳಿಗೆ ಮೋದಿ ಮ್ಯಾಂಗೋ ಎಂದು ಹೆಸರಿಟ್ಟಿದ್ದಾರೆ.
ಹಲವು ವಿಧದ ಮಾವಿನ ತಳಿಗಳನ್ನು ಬೆಳೆಸುವ ಮೂಲಕ ಪ್ರಸಿದ್ಧರಾಗಿರುವ ಹಾಜಿ ಕಲಿಮುಲ್ಲಾ,ಸುಮಾರು 300 ತಳಿ ಮಾವುಗಳನ್ನು ಬೆಳೆಸುತ್ತಿದ್ದಾರೆ. ಎರಡು ಬಣ್ಣಗಳನ್ನು ಹೊಂದಿರುವ, ಅತ್ಯಂತ ರುಚಿ ಹೊಂದಿರುವ ಮಾವಿನ ಹಣ್ಣಿನ ತಳಿಗೆ ಮಾಜಿ ಉತ್ತರ ಪ್ರದೇಶದ ರಾಜ್ಯಪಾಲ ಟಿವಿ ರಾಜೇಶ್ವರ್ ಅವರ ಹೆಸರನ್ನು ಇಟ್ಟಿದ್ದಾರೆ.