ಕೋಲ್ಕತಾ, ಜೂ15(Daijiworld News/SS): ಪಶ್ಚಿಮ ಬಂಗಾಳದಲ್ಲಿ ಸರಕಾರದ ಜತೆ ವೈದ್ಯರ ಸಂಘರ್ಷ ತೀವ್ರಗೊಂಡಿದ್ದು, ಮುಷ್ಕರ ನಿರತ ಕಿರಿಯ ವೈದ್ಯರಿಗೆ ಬೆಂಬಲ ಸೂಚಿಸಿ 700ಕ್ಕೂ ಹೆಚ್ಚು ಸರಕಾರಿ ವೈದ್ಯರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ರಾಜ್ಯದ ಆರೋಗ್ಯಪಾಲನೆ ವ್ಯವಸ್ಥೆ ಸಂಪೂರ್ಣ ಕುಸಿದಿದೆ.
ವೈದ್ಯರ ಮುಷ್ಕರ ಪಶ್ಚಿಮ ಬಂಗಾಳದಲ್ಲಿ ಉಲ್ಬಣಗೊಂಡಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಸಂಧಾನಸಭೆ ಆಹ್ವಾನವನ್ನು ಪ್ರತಿಭಟನಾ ನಿರತ ವೈದ್ಯರು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ಪ್ರತಿಭಟನಾ ನಿರತ ವೈದ್ಯರ ವಕ್ತಾರ ಅರಿಂದಮ್ ದತ್ತಾ, ಸಿಎಂ ಮಮತಾ ಬ್ಯಾನರ್ಜಿ ಅವರು ಸಂಧಾನಸಭೆ ಕರೆದಿರುವುದು ಒಳ್ಳೆಯ ವಿಚಾರವೇ. ನಾವೂ ಕೂಡ ಸಚಿವಾಲಯಕ್ಕೆ ತೆರಳಿ ಸಂಧಾನಸಭೆಯಲ್ಲಿ ಮಾತನಾಡುತ್ತೇವೆ. ಆದರೆ ಅದಕ್ಕಿಂತ ಮೊದಲು ಮಮತಾ ಬ್ಯಾನರ್ಜಿ ಅವರು, ನಿಲ್ ರತನ್ ಸರ್ಕಾರ್ ವೈದ್ಯಕೀಯ ಕಾಲೇಜಿಗೆ ಬಂದು ವೈದ್ಯರನ್ನು ಉದ್ದೇಶಿಸಿ ಬೇಷರತ್ ಕ್ಷಮೆ ಕೇಳಬೇಕು. ಆಗ ನಾವು ಸಂಧಾನ ಸಭೆಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.
ವೈದ್ಯರನ್ನು ಉದ್ದೇಶಿಸಿ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಅವರು ಮಾತನಾಡಿರುವ ಮಾತುಗಳು ಸರಿಯಲ್ಲ. ಅವರು ಎಸ್ ಎಸ್ ಕೆಎಂ ಆಸ್ಪತ್ರೆಗೆ ಹೋಗುತ್ತಾರೆ ಎಂದಾದರೆ ಖಂಡಿತಾ ಎನ್ ಆರ್ ಎಸ್ ಆಸ್ಪತ್ರೆಗೂ ಬರಬಹುದು. ಒಂದು ವೇಳೆ ಅವರು ಬರದೇ ಇದ್ದರೆ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.