ಬೆಂಗಳೂರು, ಮಾ.17 (DaijiworldNews/AA): ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಮತ್ತು ಅವರ ಸ್ನೇಹಿತ ಉದ್ಯಮಿ ಪುತ್ರ ತರುಣ್ ರಾಜು ಚಿನ್ನ ಆಮದು ಮತ್ತು ರಫ್ತಿಗಾಗಿ 2023ರಲ್ಲಿ ದುಬೈನಲ್ಲಿ ವೈರಾ ಡೈಮಂಡ್ಸ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಕಂಪನಿ ತೆರೆದಿದ್ದರು ಎಂಬುದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ತನಿಖೆ ವೇಳೆ ಬೆಳಕಿಗೆ ಬಂದಿದೆ.

ಡಿಆರ್ಐ ಅಧಿಕಾರಿಗಳು ತರುಣ್ ರಾಜು ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ದುಬೈನಲ್ಲಿ ತೆರದ ಕಂಪನಿ ಮೂಲಕ ಅಕ್ರಮವಾಗಿ ಗಳಿಸಿದ ಹಣವನ್ನು ಅವರಿಬ್ಬರು ಸಕ್ರಮಗೊಳಿಸಿಕೊಳ್ಳುತ್ತಿದ್ದರು. ಚಿನ್ನ ಖರೀದಿ ಮಾಡಿ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿಸಲಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ಈ ಮಾಹಿತಿಯ ಮೇರೆಗೆ ಇಡಿ, ವೈರಾ ಡೈಮಂಡ್ಸ್ ಟ್ರೇಡಿಂಗ್ ಕಂಪನಿ ವಹಿವಾಟು ಪರಿಶೀಲನೆ ನಡೆಸುತ್ತಿದೆ. ತರುಣ್ ರಾಜು ವ್ಯವಹಾರದ ಮೇಲೂ ಇಡಿ ಅಧಿಕಾರಿಗಳು ಒಂದು ಕಣ್ಣು ಇಟ್ಟಿದ್ದು, ಅವರ ಬ್ಯಾಂಕ್ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಡಿ ಕೂಡ ನಟಿ ರನ್ಯಾ ರಾವ್ ಮತ್ತು ತರುಣ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.