ಬೆಂಗಳೂರು, ಮಾ.17 (DaijiworldNews/AA): ಅನಧಿಕೃತವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಗಡಿಪಾರು ನಿಯಮವನ್ನು ಇನ್ನಷ್ಟು ಸರಳೀಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ವಿಧಾನಪರಿಷತ್ನಲ್ಲಿ ಇಂದು ಬಿಜೆಪಿ ಸದಸ್ಯ ಪಿ. ಹೆಚ್. ಪೂಜಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ಅಫ್ರಿಕಾ ಪ್ರಜೆಗಳು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇವರನ್ನು ಪತ್ತೆ ಹಚ್ಚಲು ಠಾಣಾ ಮಟ್ಟದಲ್ಲಿ ವಿದೇಶಿಯರ ಚಲನವಲನದ ಬಗ್ಗೆ ನಿಗಾವಹಿಸಲಾಗಿದೆ. ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಡಿಟೆನ್ಶನ್ ಸೆಂಟರ್ನಲ್ಲಿ ಇರಿಸಲಾಗುತ್ತಿದೆ ಎಂದರು.
ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ಆಯಾ ದೇಶಗಳ ವಿದೇಶಾಂಗ ಇಲಾಖೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಬಳಿಕ ಗಡಿಪಾರು ಮಾಡಲಾಗುತ್ತಿದೆ. ತ್ವರಿತಗತಿಯಲ್ಲಿ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರವು ಗಡಿಪಾರು ನಿಯಮವನ್ನು ಸರಳೀಕರಣಗೊಳಿಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಾಂಗ್ಲಾದೇಶಿಯರು ಕಾಫಿ ತೋಟದಲ್ಲಿ ಕೆಲಸಗಾರರಾಗಿ ಹಾಗೂ ಬೆಂಗಳೂರಿನಲ್ಲಿ ಶೆಡ್ ಹಾಕಿಕೊಂಡು ಚಿಂದಿ ಆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅಂತವರನ್ನು ಪತ್ತೆ ಹಚ್ಚಲಾಗಿದೆ. ಇದುವರೆಗೂ 133 ಪ್ರಕರಣಗಳಲ್ಲಿ 467 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. 159 ಜನರನ್ನು ಗಡಿಪಾರು ಮಾಡಿದರೆ, 204 ಮಂದಿಯನ್ನು ಗಡಿಪಾರು ಮಾಡುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ವಿದೇಶಿ ಪ್ರಜೆಗಳ ಉಪಟಳ ಹೆಚ್ಚಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ನೆಲೆಸುವುದಲ್ಲದೆ ಉದ್ದೇಶಪೂರ್ವಕವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರನ್ನು ಬಂಧಿಸಿದ್ದರೂ, ಕೆಲ ದಿನಗಳ ಬಳಿಕ ಜಾಮೀನು ಪಡೆದು ಮತ್ತೆ ಅಪರಾಧ ಕೃತ್ಯಗಳಲ್ಲಿ ನಿರತರಾಗಿದ್ದಾರೆ. ಒಮ್ಮೆ ವ್ಯಕ್ತಿ ವಿರುದ್ಧ ಅಪರಾಧ ಪ್ರಕರಣ ದಾಖಲಾದರೆ ಪ್ರಕರಣ ಇತ್ಯರ್ಥವಾಗುವವರೆಗೂ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. ಈ ಅವಕಾಶವನ್ನು ವಿದೇಶಿಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೇಂದ್ರ ಮಟ್ಟದಲ್ಲಿ ನಿಯಮಾವಳಿ ಸಡಿಲಗೊಳಿಸಬೇಕು. ಅಲ್ಲದೆ, ಅಕ್ರಮ ಬಾಂಗ್ಲಾದೇಶ ನುಸುಳುಕೋರರು ದೇಶದ ಗಡಿಯೊಳಗೆ ಬರದ ರೀತಿ ಇನ್ನಷ್ಟು ಭದ್ರತೆ ವಹಿಸಬೇಕೆಂದು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ವಿವರಿಸಿದರು.