ನವದೆಹಲಿ, ಜೂ 15 (Daijiworld News/MSP): ರಾಜ್ಯ ಘಟಕದ ಮುಖ್ಯಸ್ಥರು ಭಾಗಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಬಿಜೆಪಿ ಮುಖಂಡರಿಗೆ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ. ಕೇರಳ ರಾಜ್ಯ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಮಹತ್ವ ನೀಡುವಂತೆ ಮುಖಂಡರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಖಡಕ್ ಸೂಚನೆ ನೀಡಿದ್ದಾರೆ.
2019 ರ ಲೋಕಸಭೆಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಜಯಭೇರಿ ಬಾರಿಸಿದೆ. ಬಿಜೆಪಿ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣದಂತಹ ರಾಜ್ಯಗಳಲ್ಲಿ ತನ್ನ ವರ್ಚಸ್ಸು ಕೊಂಚ ಹೆಚ್ಚಾಗಿಯೇ ಬೆಳೆಸಿಕೊಂಡಿದೆ. ಇದೇ ರೀತಿ ಮುಂಬರುವ ವರ್ಷಗಳಲ್ಲಿ ಬಿಜೆಪಿ ಬಲಾಢ್ಯವಲ್ಲದ ರಾಜ್ಯಗಳಲ್ಲಿಯೂ ಪಕ್ಷವನ್ನು ವಿಸ್ತರಿಸಬೇಕು ಎಂದು ಸಭೆಯಲ್ಲಿ ಆದೇಶಿಸಲಾಗಿದೆ.
ಈ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ದೃಷ್ಟಿಯನ್ನು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನೆಟ್ಟಿದ್ದು, ಪಕ್ಷ ಸಂಘಟನೆಗೆ ಹಾಗೂ ಹೊಸ ಸದಸ್ಯತ್ವ ನೋಂದಣಿ ಕೆಲಸಕ್ಕೆ ಚುರುಕುಮುಟ್ಟಿಸುವಂತೆ ಶಾ ಆದೇಶಿಸಿದ್ದಾರೆ. ಇದರೊಂದಿಗೆ ತಮಿಳುನಾಡು ಮತ್ತು ಆಂಧ್ರ-ತೆಲಂಗಾಣದಲ್ಲಿಯೂ ಪಕ್ಷದ ಬಲವರ್ಧನೆ ಮಾಡಬೇಕು ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಗೆಲ್ಲಲು ಈಗಲೇ ರಣತಂತ್ರಕ್ಕೆ ಮುಂದಾಗಿರುವ ಬಿಜೆಪಿ, ಮತದಾರರ ನಾಡಿಮಿಡಿತ ಅರ್ಥೈಸಿಕೊಳ್ಳಲು ತಳಮಟ್ಟದ ಕೆಲಸ ಮಾಡುತ್ತಿದೆ. ಜನರ ನಾಡಿ ಮಿಡಿತಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ.