ದೆಹಲಿ, ಜೂ15(Daijiworld News/SS): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿ ಕೆಲ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು.
ದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿದ್ದಾರೆ. ಅತ್ಯಂತ ಪ್ರಮುಖವಾದ ನೀತಿ ಆಯೋಗದ ಸಭೆ ಇದಾಗಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಈ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮಾತನಾಡಿದ ಸಿಎಂ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ಹಾಗೂ ಬಡ್ಡಿ ಮೊತ್ತವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯ್ದೆ 1961 ರ ನಿಯಮ 10(29ಎ) ಅಡಿ ಮಂಡಳಿಯನ್ನು ಸೇರ್ಪಡೆಗೊಳಿಸಿ, ಕಾಫಿ ಮಂಡಳಿ, ರಬ್ಬರ್ ಮಂಡಳಿಗಳಂತೆ, ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಭಾಷಾ ಜ್ಞಾನ ಹೊಂದಿರುವ ಸ್ಥಳೀಯರಿಗೆ ಅವಕಾಶ ಒದಗಿಸುವಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (ಐಬಿಪಿಎಸ್) ನಿಯಮಗಳಿಗೆ ತಿದ್ದುಪಡಿ ಸೇರಿದಂತೆ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳು ಸಂವಿಧಾನ ಮಾನ್ಯತೆ ನೀಡಿರುವ ಎಲ್ಲ 22 ಭಾಷೆಗಳಲ್ಲಿ ನಡೆಸಬೇಕು ಹಾಗೂ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿಯಲ್ಲೂ ಸ್ಥಳೀಯರಿಗೆ ಅವಕಾಶ ಒದಗಿಸುವ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ.
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು 2018-19ನೇ ಸಾಲಿಗೆ ಬಾಕಿ ಇರುವ 233 ಕೋಟಿ ರೂಪಾಯಿ ಪರ್ಫಾರ್ಮೆನ್ಸ್ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.