ಪಶ್ಚಿಮ ಬಂಗಾಳ,ಜೂ 15 (Daijiworld News/MSP): ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ನಾಲ್ಕು ದಿನಗಳಿಂದ ಧರಣಿ ಕುಳಿತಿರುವ ಪ್ರತಿಭಟನಾ ನಿರತ ಏಮ್ಸ್ ರೆಸಿಡೆಂಟ್ ಡಾಕ್ಟರ್ ಗಳ ಸಂಘ ವೈದ್ಯರ ಮುಷ್ಕರವನ್ನು ಇಂದು ಶನಿವಾರ ಹಿಂಪಡೆದುಕೊಂಡಿದೆ. ಭಾರತೀಯ ವೈದ್ಯಕೀಯ ಸಂಘದ ನಿಯೋಗ ಇಂದು ಮತ್ತೆ ಆರೋಗ್ಯ ಸಚಿವರನ್ನು ಭೇಟಿಯಾಗಿದೆ.
ಮುಷ್ಕರ ಹಿಂಪಡೆಯುತ್ತಿದ್ದಂತೆ ಸಂಘಟನೆ 48 ತಾಸುಗಳ ಗಡುವು ನೀಡಿದ್ದು ಇದರೊಳಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿ ವೈದ್ಯರ ಬೇಡಿಕೆಯನ್ನು ಈಡೇರಿಸಬೇಕೆಂದು ಮಮತಾ ಅವರನ್ನು ಸಂಘವು ಆಗ್ರಹಿಸಿದೆ. ಒಂದು ವೇಳೆ 48 ತಾಸೊಳಗೆ ವೈದ್ಯರ ಬೇಡಿಕೆ ಈಡೇರದಿದ್ದರೆ ಅಸಫಲರಾದರೇ ದೆಹಲಿಯ ಆಸ್ಪತ್ರೆಯಲ್ಲಿ ಜೂನ್ 17ರ ಸೋಮವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುವುದು ಅನಿವಾರ್ಯವಾದೀತು ಎಂಬ ಎಚ್ಚರಿಕೆಯನ್ನು ಸಂಘ ರವಾನಿಸಿದೆ.
"ಮುಷ್ಕರ ಹಿಂಪಡೆದರೂ, ಶನಿವಾರದಿಂದಲೇ ಕರ್ತವ್ಯಕ್ಕೆ ಮರಳಿ ಕಪ್ಪು ಬ್ಯಾಜ್, ಹೆಲ್ಮೆಟ್ ಮತ್ತು ಬ್ಯಾಂಡಿಟ್ಸ್ ಗಳನ್ನು ತೊಟ್ಟುಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ಮುಂದುವರಿಸಿದ್ದೇವೆ. 48 ತಾಸೊಳಗೆ ಈಡೇರಿಸಬೇಕೆಂಬ ಗಡುವು ನೀಡಿದ್ದು ಅದರೊಳಗೆ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಲದ ಆರೋಗ್ಯ ಸಚಿವರು ಸ್ಪಂದಿಸದಿದ್ದರೆ ಜೂನ್ 17ರ ಬಳಿಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ" ಎಂಬ ಎಚ್ಚರಿಕೆಯ ಸಂದೇಶವನ್ನು ಏಮ್ಸ್ನ ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಅಮರೀಂದರ್ ಸಿಂಗ್ ರವಾನಿಸಿದ್ದಾರೆ.