ಕಾರವಾರ, ಜೂ15(Daijiworld News/SS): ಜಿಂದಾಲ್ ರಾಜ್ಯದಲ್ಲಿ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ಜಿಂದಾಲ್ ಕಂಪನಿಗೆ ಜಮೀನು ನೀಡುವುದು ನಿಗದಿಯಾಗಿತ್ತು. ಜಿಂದಾಲ್ ಕಂಪನಿಯಿಂದ ನಮ್ಮ ಸರ್ಕಾರ ಹೆಚ್ಚಿನ ಹಣ ಕೇಳಿದ್ದರೂ ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿರೋಧ ಪಕ್ಷ ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು. ಬಿಜೆಪಿ ಸರ್ಕಾರ ಇದ್ದಾಗಲೇ ಆ ಜಮೀನಿಗೆ ದರ ನಿಗದಿ ಮಾಡಲಾಗಿತ್ತು. ನಾವು ಹೆಚ್ಚಿನ ಹಣಕ್ಕೆ ಭೂಮಿ ನೀಡಿದ್ದರೂ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು ಎಂದು ಹೇಳಿದ್ದಾರೆ.
ಜಿಂದಾಲ್ ಕಂಪನಿಯವರು ಸಾವಿರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಜಿಂದಾಲ್ ರಾಜ್ಯದಲ್ಲಿ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬಂಡವಾಳ ಹೂಡಿಕೆಗೆ ಸಂಸ್ಥೆಗಳನ್ನು ಆಕರ್ಷಿಸಲು ಎಲ್ಲ ರಾಜ್ಯಗಳು ಕಾಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ವ್ಯಕ್ತವಾದರೆ ರಾಜ್ಯದಲ್ಲಿ ಯಾರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ..? ಎಂದು ಪ್ರಶ್ನಿಸಿದರು.