ಬೆಂಗಳೂರು, ಮಾ.19(DaijiworldNews/TA) : ಆರ್ಎಸ್ಎಸ್ ಸಂಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘನ ಅಭಿಪ್ರಾಯಕ್ಕೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆರ್ಎಸ್ಎಸ್ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದು, ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ದಾಖಲಿಸಲಾಗಿದೆ. ಕಿರಣ್.ಎಸ್ ಖಾಸಗಿ ದೂರು ಸಲ್ಲಿಸಿದ್ದು, ಬಿಎನ್ಎಸ್ ಸೆಕ್ಷನ್ 299,352,356(2)ಅಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

‘ಆರ್ಎಸ್ಎಸ್ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್ಎಸ್ಎಸ್ನವರ ದ್ವೇಷ ರಾಜಕಾರಣ, ಹಿಂಸಾ ರಾಜಕಾರಣವೇ ಗಲಭೆ ಹಾಗೂ ಅಪರಾಧಗಳಿಗೆ ಕಾರಣ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪವು ಸೋಮವಾರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ಅಲ್ಲದೇ ಆರ್ಎಸ್ಎಸ್ ಕುರಿತ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದು ವಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ ‘ನನ್ನ ಮಾತಿಗೆ ನಾನು ಬದ್ಧ. ಆರ್ಎಸ್ಎಸ್ನವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಅವರನ್ನು ಎದುರಿಸಲು ಸಿದ್ಧ’ ಎಂದು ಸವಾಲನ್ನು ಹಾಕಿದ್ದರು. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. ಸಿದ್ದರಾಮಯ್ಯ ಅವರು, ‘ಯಾವುದೇ ಕಾರಣಕ್ಕೂ ಆರ್ಎಸ್ಎಸ್ ಕುರಿತ ಹೇಳಿಕೆ ಹಿಂಪಡೆಯುವುದಿಲ್ಲ. ನಾನು ಇರುವುದನ್ನೇ ಹೇಳಿದ್ದೇನೆ’ ಎಂದು ಪಟ್ಟು ಹಿಡಿದ ಕಾರಣ ಮತ್ತೊಮ್ಮೆ ಕಲಾಪ ಮುಂದೂಡಿ ಸಂಧಾನಸಭೆ ನಡೆಸಲಾಗಿತ್ತು. ಬಳಿಕ ಸ್ಪೀಕರ್ ಯು.ಟಿ. ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಎಸ್ಎಸ್ ಕುರಿತ ಹೇಳಿಕೆ ಹಾಗೂ ಕಾಂಗ್ರೆಸ್ ಪಾಕಿಸ್ತಾನ್ ಏಜೆಂಟ್ ಎಂಬ ಪದಗಳನ್ನು ಕಡತದಿಂದ ತೆಗೆಯುವುದಾಗಿ ಹೇಳಿ ಕಲಾಪ ಸುಗಮವಾಗಿ ನಡೆಸಲು ಸಹಕರಿಸುವಂತೆ ವಿನಂತಿಸಿದ್ದರು. ನಂತರ ವಿವಾದ ತಣ್ಣಗಾಗಿತ್ತು. ಇದೀಗ ಸಿಎಂ ವಿರುದ್ಧ ದೂರು ದಾಖಲಿಸಿ ಬಿಜೆಪಿಗರು ಆಕ್ರೋಶ ಹೊರಹಾಕಿದ್ದಾರೆ.