ಹಾವೇರಿ,ಜೂ15(Daijiworldnews/AZM) : ಮೈತ್ರಿ ಸರ್ಕಾರ ಬೀಳುವುದೂ ಇಲ್ಲ, ಯಾವುದೇ ಶಾಸಕರು ರಾಜೀನಾಮೆ ನೀಡುವುದೂ ಇಲ್ಲ. ಹಾಗಾಗಿ ಸರಕಾರ ತನ್ನ ಐದು ವರ್ಷದ ಆಡಳಿತವನ್ನು ಪೂರ್ಣಗೊಳಿಸಲಿದೆ ಎಂದು ಸಚಿವ ಆರ್ ಶಂಕರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ನನ್ನನ್ನು ಸಂಪುಟದಿಂದ ಕೈ ಬಿಟ್ಟಾಗ ಸರ್ಕಾರ ರಚನೆಯ ಕಸರತ್ತು ನಡೆಯಿತು. ಆದರೇ ಯಾರೂ ರಾಜೀನಾಮೆ ನೀಡಲಿಲ್ಲ. ಮೈತ್ರಿ ಸರ್ಕಾರದ 16 ಶಾಸಕರು ರಾಜೀನಾಮೆ ನೀಡುವುದಂತೂ ಸಾಧ್ಯವೇ ಇಲ್ಲ. ಪಕ್ಷಗಳಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಮನವೊಲಿಕೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಈ ಬಾರಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಗೆದ್ದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ. ನಾನು ಯಾವುದೇ ತಾರತಮ್ಯವನ್ನು ಕ್ಷೇತ್ರದ ಯಾವುದೇ ಜನರಿಗೂ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಇದೇ ವೇಳೆ ಸಚಿವ ಆರ್ ಶಂಕರ್ ಸ್ಪಷ್ಟಪಡಿಸಿದರು.