ಕಲಬುರಗಿ, ಮಾ.23 (DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಓಲೈಕೆಗೆ ಆದ್ಯತೆ ನೀಡಿದೆಯೇ ಹೊರತು ಅಭಿವೃದ್ಧಿ ಕಡೆಗೆ ಒತ್ತು ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಲಬುರಗಿಯಲ್ಲಿಂದು ಹೇಳಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಆದರೆ ಅವರ ಓಲೈಕೆ ಮಾಡಲು ಬಹುಸಂಖ್ಯಾತರನ್ನು ಕಡೆಗಣಿಸಿರುವುದನ್ನು ಸಹಿಸುವುದಿಲ್ಲ. ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2025-26ನೇ ಸಾಲಿನ ಮುಂಗಡಪತ್ರದಲ್ಲಿ ಅಲ್ಪಸಂಖ್ಯಾತರ ಓಲೈಕೆಗೇ ಗಮನ ನೀಡಿದ್ದಾರೆಯೇ ವಿನಃ ರಾಜ್ಯದ ಸಮಗ್ರ ಅಭಿವೃದ್ಧಿ, ಕಲ್ಯಾಣ ಬಗ್ಗೆ ಒತ್ತು ನೀಡಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ದೂರದೃಷ್ಟಿ ಇಲ್ಲದ ಮುಂಗಡಪತ್ರ ಇದಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹನಿಟ್ರ್ಯಾಪ್ ಸೇರಿದಂತೆ ಇನ್ನಿತರ ವಿಷಯಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಗೊಂದಲದಿಂದ ಹೊರಗೆ ಬರುತ್ತಿವೆ. ಆಡಳಿತ ಪಕ್ಷದ ಸಚಿವರು, ಶಾಸಕರು ಈ ಸಂಬಂಧ ಹೇಳಿಕೆ ನೀಡಲಿ. ಆ ಬಳಿಕ ಪ್ರತಿಪಕ್ಷವಾಗಿ ತಾವು ಉತ್ತರ ನೀಡುತ್ತೇವೆ. ರಾಜ್ಯದಲ್ಲಿ ಇತ್ತೀಚಿನ ಬೆಳವಣೆಗೆಗಳನ್ನು ಗಮನಿಸಿದರೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.