ಬೆಂಗಳೂರು, ಜೂ16(Daijiworld News/SS): ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರವಾಗಿ ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ನೀಡಿರುವುದನ್ನು ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಪ್ರತಿಭಟನೆ ಇದೀಗ ತೀವ್ರಗೊಂಡಿದೆ.
ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿರುವುದು ಕಮಿಷನ್ ವ್ಯವಹಾರ ದಂಧೆಯ ಭ್ರಷ್ಟ ಸರ್ಕಾರ. ಆದಷ್ಟು ಬೇಗ ತೊಲಗಬೇಕು ಎನ್ನುವುದು ಜನರ ನಿರೀಕ್ಷೆಯಾಗಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುವ ಪ್ರಯತ್ನವನ್ನು ಮಾಡದೆ ರಾಜಕೀಯ ಮೇಲಾಟದಲ್ಲಿ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳು- ಸಚಿವರ ನಡುವೆ ಹೊಂದಾಣಿಕೆಗಳಿಲ್ಲ. ಸಾಮಾನ್ಯ ಜನರ ಯಾವ ಕೆಲಸವೂ ಆಗುತ್ತಿಲ್ಲ. ನಿರ್ಜೀವವಾಗಿರುವ ಸರ್ಕಾರ ಯಾವಾಗ ತೊಲಗುವುದೋ ಎಂದು ಜನ ಎದುರು ನೋಡುತ್ತಿದ್ದಾರೆ. ಅಧಿಕಾರದಾಸೆಗೆ ಹೊಂದಾಣಿಕೆ ಮಾಡಿಕೊಂಡಿರುವ ಸರ್ಕಾರವನ್ನು ಕೆಳಗಿಳಿಸುವ ತನಕ ಹೋರಾಟ ಅನಿವಾರ್ಯ ಎಂದು ತಿಳಿಸಿದ್ದಾರೆ.
ಜಿಂದಾಲ್ಗೆ ಕೊಟ್ಟಿರುವ ಭೂಮಿ ವಾಪಸ್ ಪಡೆಯಬೇಕು. ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು. ಎಲ್ಲದರಲ್ಲೂ ವಿಫಲವಾಗಿರುವ ಸರ್ಕಾರ ಕೂಡಲೇ ರಾಜೀನಾಮೆ ನೀಡಿ ನಿರ್ಗಮಿಸಬೇಕು ಎಂದು ಆಗ್ರಹಿಸಿದ್ದಾರೆ.