ಬೆಂಗಳೂರು, ಜೂ16(Daijiworld News/SS): ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ 3,667 ಎಕರೆ ಭೂಮಿ ನೀಡಿರುವುದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಅಹೋರಾತ್ರಿ ಧರಣಿ ಆರಂಭಿಸಿದೆ. ಜೂ.14ರಂದು ಬೆಳಗ್ಗೆ ಬೆಂಗಳೂರಿನ ಆನಂದರಾವ್ ವೃತದಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ ಚಾಲನೆ ನೀಡಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಆರಂಭವಾಗಿದ್ದು, ಮೂರನೇ ದಿನವಾದ ಇಂದು, ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾ ಮೇಲೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಈ ನಿರ್ಧಾರದ ಬೆನ್ನಲ್ಲೇ, ಸಿಎಂ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ನಾಯಕರ ‘ಅಹೋರಾತ್ರಿ’ ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ ಕಚೇರಿಗೆ ಮುತ್ತಿಗೆಯ ಅವಶ್ಯಕತೆಯಿಲ್ಲ. ಜಿಂದಾಲ್, ಬರ, ರೈತರ ಸಾಲಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಹಲವು ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ.